ನವದೆಹಲಿ: ಭಾರತದಲ್ಲಿ ಮುಸ್ಲಿಮರ ಸಹ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರ್ಪಡೆಯಾಗಬಹುದು ಎಂದು ಆರ್‌ಎಸ್ಎಸ್ ಪ್ರಮುಖ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.
ಆದ್ರೆ ಮುಸ್ಲಿಮರ ಸೇರ್ಪಡೆಗೆ ಮೋಹನ್ ಭಾಗವತ್ ಷರತ್ತು ವಿಧಿಸಿದ್ದಾರೆ. ಸದ್ಯ ಮೋಹನ್ ಭಾಗವತ್ ನಾಲ್ಕು ದಿನಗಳ ವಾರಾಣಾಸಿಯ ಪ್ರವಾಸದಲ್ಲಿದ್ದು, ಏಪ್ರಿಲ್ 6ರ ಭಾನುವಾರದಂದು ಯಾರೆಲ್ಲಾ RSS ಸೇರ್ಪಡೆ ಆಗಬಹುದು ಪ್ರಶ್ನೆಗೆ ಮೋಹನ್ ಭಾಗವತ್ ಉತ್ತರಿಸಿದರು.
ವಾರಾಣಾಸಿಯ ಲಜಪತ್ ನಗರದಲ್ಲಿರುವ ಆರ್‌ಎಸ್ಎಸ್ ಶಾಖೆಗೆ ಭೇಟಿ ನೀಡಿದ ಮೋಹನ್ ಭಾಗವತ್, ಜಾತಿ ತಾರತಮ್ಯ, ಪರಿಸರ ರಕ್ಷಣೆ, ಆರ್ಥಿಕ ಚೇತರಿಕೆ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಸಂಬಂಧಿಸಿದ ಕುರಿತು ಸವಿವರವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಓರ್ವ ಕಾರ್ಯಕರ್ತ, ಮುಸ್ಲಿಮರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರನ್ನಾಗಿ ಮಾಡಿಕೊಳ್ಳಬಹುದೇ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಮೋಹನ್ ಭಾಗವತ್, ಹೌದು. ಆದ್ರೆ ಒಂದು ಕಂಡೀಷನ್ ಎಂದು ಹೇಳಿದರು.
ನಮ್ಮ ಆರ್‌ಎಸ್‌ಎಸ್ ಶಾಖೆಗೆ ಭಾರತದ ಎಲ್ಲಾ ವಾಸಿಗಳಿಗೆ ಸ್ವಾಗತ. ಆದರೆ ಶಾಖೆ ಸೇರ್ಪಡೆಯಾಗುವ ಪ್ರತಿಯೊಬ್ಬ ವ್ಯಕ್ತಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಹೇಳಲು ಯಾವುದೇ ಕಾರಣಕ್ಕೂ ಹಿಂದೇಟು ಹಾಕಿರಬಾರದು ಮತ್ತು ಕೇಸರಿ ಧ್ವಜವನ್ನು ಗೌರವಿಸಬೇಕು ಎಂದು ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಸದ್ಯ ಮೋಹನ್ ಭಾಗವತ್ ನೀಡಿದ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಭಾರತದಲ್ಲಿ ವಿವಿಧ ಧರ್ಮಗಳನ್ನು ಪಾಲಿಸುವ ಜನರಿದ್ದು, ಆದ್ರೆ ಎಲ್ಲರ ಸಂಸ್ಕೃತಿ ಒಂದೇ ಆಗಿರುತ್ತದೆ. ಭಾರತದ ಎಲ್ಲಾ ಧರ್ಮಗಳು, ಪಂಗಡಗಳು ಮತ್ತು ಜಾತಿಗಳ ಜನರನ್ನು ಪ್ರತಿಯೊಂದು ಶಾಖೆಯಲ್ಲೂ ಸ್ವಾಗತಿಸಲಾಗುತ್ತದೆ. ಹಾಗಾಗಿ ಎಲ್ಲಾ ಧರ್ಮದವರಿಗೂ ಆರ್‌ಎಸ್ಎಸ್ ಶಾಖೆಯ ಬಾಗಿಲು ತೆರೆದಿರುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಲಜಪತ್ ನಗರ ಆರ್‌ಎಸ್‌ಎಸ್ ಶಾಖೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಏಪ್ರಿಲ್ 5ರಂದು ಕಾಶಿಯ ವೇದ ವಿದ್ವಾಂಸರನ್ನು ಭೇಟಿಯಾಗಿ ಮೋಹನ್ ಭಾಗವತ್ ಸಭೆ ನಡೆಸಿದ್ದರು. ಭಾರತವನ್ನು ವಿಶ್ವ ಗುರು (ವಿಶ್ವ ನಾಯಕ) ಮಾಡುವ ಗುರಿಯನ್ನು ಸಾಧಿಸಲು ಶ್ರಮಿಸುವ ಬಗ್ಗೆವಿದ್ವಾಂಸರೊಂದಿಗೆ ಮೋಹನ್ ಭಾಗವತ್ ಚರ್ಚೆ ನಡೆಸಿದ್ದರು.
ಈ ಹಿಂದೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಬಳಿಕ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂತು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ಆರ್‌ಎಸ್‌ಎಸ್ ಸಂಸ್ಥೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿರುವುದರಿಂದ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಬ್ರಿಟಿಷರ ವಸಾಹತು ನೀತಿ ಎದುರು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರಿಂದ ದೇಶ ಸ್ವಾತಂತ್ರ್ಯ ಹೊಂದಿತ್ತು. ಸ್ವಾತಂತ್ರ್ಯಕ್ಕೆ ಅರ್ಥ ತಂದುಕೊಡುವಲ್ಲಿ ಸಂವಿಧಾನದ ಪಾತ್ರ ಅತ್ಯಂತ ದೊಡ್ಡದಾಗಿದ್ದು, ಇದಕ್ಕಾಗಿ ಅಂಬೇಡ್ಕರ್‌ರಂತಹ ಮಹನೀಯರಿಗೆ ಋಣಿಯಾಗಿರಬೇಕೇ ವಿನಃ ಬಾಲರಾಮನಿಗಲ್ಲ ಎಂದು ಹೇಳಿತ್ತು