Monday, April 21, 2025
Google search engine

Homeರಾಜ್ಯಗಣೇಶೋತ್ಸವ ಮೆರವಣಿಗೆಗೆ ಈದ್ ಮಿಲಾದ್ ಮುಂದೂಡಿದ ಮುಸ್ಲಿಮರು

ಗಣೇಶೋತ್ಸವ ಮೆರವಣಿಗೆಗೆ ಈದ್ ಮಿಲಾದ್ ಮುಂದೂಡಿದ ಮುಸ್ಲಿಮರು

ಬೆಳಗಾವಿ: ಗಡಿ, ಭಾಷೆಯ ಹೆಸರಿನಲ್ಲಿ ನಡೆಯುವ ಹಲವು ವಿವಾದಗಳ ಮಧ್ಯೆ ಬೆಳಗಾವಿ ಹಬ್ಬಗಳ ವಿಚಾರದಲ್ಲಿ ಸೌಹಾರ್ದತೆ ಮೆರೆಯುತ್ತಾ ಬಂದಿದೆ. ಇದಕ್ಕೆ ಹೊಸ ಉದಾಹರಣೆಯೆಂಬಂತೆ, ಈ ಬಾರಿ ಎಲ್ಲ ಧರ್ಮ, ಭಾಷೆಯವರು ಒಂದಾಗಿ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಗಣೇಶ ನಿಮಜ್ಜನೆ ಮೆರವಣಿಗೆಗೆ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಮುಂದೂಡಿದ್ದಾರೆ.

೧೧೯ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ವೈಭವದ ಗಣೇಶೋತ್ಸವಕ್ಕೆ ಕುಂದಾನಗರಿ ಖ್ಯಾತಿಯ ಬೆಳಗಾವಿ ಸಜ್ಜಾಗಿದೆ. ವಿಘ್ನ ನಿವಾರಕನನ್ನು ಶ್ರದ್ಧಾ-ಭಕ್ತಿಯಿಂದ ಬರಮಾಡಿಕೊಂಡು, ಸಂತಸದಿಂದ ಚೌತಿ ಆಚರಿಸಲು ಜನತೆ ಉತ್ಸುಕರಾಗಿದ್ದಾರೆ. ಕಳೆದೆರಡು ವರ್ಷ ಚೌತಿ ಮೇಲೆ ಕೋವಿಡ್?೧೯ ನಿರ್ಬಂಧಗಳಿದ್ದವು. ಇದೀಗ ಕೊರೊನಾ ಉಪಟಳವಿಲ್ಲ. ಹೀಗಾಗಿ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ.

ಸೆ. ೧೯ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಉತ್ಸವ ಮಂಡಳಿಗಳು ನಿರ್ಧರಿಸಿವೆ. ೧೦ ದಿನಗಳ ಕಾಲ ಗಣೇಶನ ಆರಾಧನೆ ಜೋರಾಗಿರುತ್ತದೆ. ೧೦ನೇ ದಿನ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನಾ ಮೆರವಣಿಗೆ ಅದ್ಧೂರಿಯಾಗಿ ನೆರವೇರಲಿದೆ. ಈ ದೃಶ್ಯವೈಭವ ಕಣ್ತುಂಬಿಕೊಳ್ಳಲು ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ.

ಈ ಬಾರಿ ಸೆ.೨೮ರಂದು ಗಣೇಶ ನಿಮಜ್ಜನಾ ಮೆರವಣಿಗೆ ದಿನವೇ ಈದ್ ಮಿಲಾದ್ ಹಬ್ಬ ಬಂದಿದೆ. ಆ ದಿನ ಅವರೂ ಕೂಡಾ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಸುತ್ತಾರೆ. ಇಂಥ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಮುಸ್ಲಿಂ ಧರ್ಮಗುರುಗಳು, ಅಂಜುಮನ್-ಏ-ಇಸ್ಲಾಂ ಸಂಸ್ಥೆಯವರು ಸಭೆ ನಡೆಸಿ ತಮ್ಮ ಹಬ್ಬವನ್ನು ಅಕ್ಟೋಬರ್ ೧ರಂದು ಆಚರಿಸಲು ನಿರ್ಧರಿಸಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಹಾಗು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, “ಸಿರತ್ ಕಮಿಟಿ, ಅಂಜುಮನ್ ಸಂಸ್ಥೆ, ಎಲ್ಲ ಜಮಾತ್ ಧರ್ಮಗುರುಗಳು ಸೇರಿಕೊಂಡು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಉದ್ದೇಶದಿಂದ ಈದ್ ಮಿಲಾದ್ ಮುಂದೂಡಲಾಗಿದೆ. ಗಣೇಶೋತ್ಸವ ಮೆರವಣಿಗೆಗೆ ನಾವೂ ಹೋಗುತ್ತೇವೆ. ನಮ್ಮ ಹಬ್ಬಕ್ಕೆ ಹಿಂದೂ ಸಮಾಜ ಬಾಂಧವರನ್ನೂ ಆಹ್ವಾನಿಸುತ್ತೇವೆ. ಇದರಿಂದ ಸೌಹಾರ್ದಯುತ ವಾತಾವರಣ ನಿರ್ಮಾಣವಾಗುತ್ತದೆ” ಎಂದರು.

ಗಣೇಶ ಮಂಡಳಿ ಮುಖಂಡ ವಿಕಾಸ ಕಲಘಟಗಿ ಮಾತನಾಡಿ, “ಮುಸ್ಲಿಂ ಬಾಂಧವರು ಕೈಗೊಂಡಿರುವುದು ಐತಿಹಾಸಿಕ ನಿರ್ಧಾರ. ಇದು ಇಡೀ ರಾಜ್ಯಕ್ಕೆ ಮಾದರಿ. ಎರಡೂ ಸಮಾಜದವರು ಒಗ್ಗಟ್ಟಾಗಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಯಶಸ್ವಿಗೊಳಿಸುತ್ತೇವೆ” ಎಂದರು.

RELATED ARTICLES
- Advertisment -
Google search engine

Most Popular