ಮೈಸೂರು: ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಮಾನವೀಯತೆ ಹದಗೆಟ್ಟ ಘಟನೆ ನಡೆದಿದೆ. ಮೈಕ್ರೋ ಫೈನಾನ್ಸ್ ಕಾಟ ಮುಂದುವರೆದಿದ್ದು ತಂದೆ ತಾಯಿ ಲೋನ್ ಕಟ್ಟಿಲ್ಲ ಎಂದು 7 ವರ್ಷದ ಹೆಣ್ಣು ಮಗುವನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದ ಘಟನೆ ನಡೆದಿದೆ.
ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗುವನ್ನು ಸಿಬ್ಬಂದಿಗಳು ಕರೆದೊಯ್ದು ನಿಮ್ಮ ತಾಯಿ ಎಲ್ಲಿ ತೋರಿಸಿ ಎಂದು ಮಗುವಿಗೆ ಹಿಂಸೆ ನೀಡಿರುವ ಆರೋಪ ಕೇಳಿ ಬಂದಿದೆ.
ಬಜಾಜ್ ಮೈಕ್ರೋ ಫೈನಾನ್ಸ್ನಿಂದ 30 ಸಾವಿರ ರೂ. ಸಾಲ ಪಡೆದಿದ್ದ ನವೀನ್ ಮತ್ತು ಪ್ರಮೀಳಾ ದಂಪತಿಯು 13 ತಿಂಗಳ ಲೋನ್ ಪಾವತಿಸಿದ್ದರು. ಈ ತಿಂಗಳು 4 ದಿನ ತಡವಾಗಿದಕ್ಕೆ ಸಿಬ್ಬಂದಿಗಳು ಮನೆಗೆ ಬಂದು ನವೀನ್ ತಾಯಿಗೆ ಬೈದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ. ಬಳಿಕ ಪಕ್ಕದ ಊರಿನಲ್ಲಿದ್ದ ಮಗುವಿನ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸು ಬಾ ಎಂದು ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದರು ಎನ್ನಲಾಗಿದೆ.
ತಾಳಿ ಅಡವಿಟ್ಟು ದುಡ್ಡು ಕೊಡ್ತೀವಿ ಸಂಜೆ ಬನ್ನಿ ಎಂದರೂ ಕೂಡ ಅವರ ಮಾತನ್ನ ಕೇಳದೆ ಈಗಲೇ ಹಣ ಬೇಕು ಎಂದು ಸಿಬ್ಬಂದಿಗಳು ಪೀಡಿಸಿದ್ದು, 4 ದಿನಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಈ ಬಗೆಗಿನ ವರ್ತನೆ ನಾಗರೀಕ ಸಮಾಜ ತಲೆತಗ್ಗಿಸುವಂತಿದ್ದು, ಸರ್ಕಾರದಿಂದ ಗಂಭೀರ ಕ್ರಮದ ಅಗತ್ಯವಿದೆ.