ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯು ಕರೆ ನೀಡಿರುವ ಬಂದ್ ಬೆಂಬಲಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸದಸ್ಯರು ಗ್ರಾಮಾಂತರ ಬಸ್ ನಿಲ್ದಾಣ(ಸಬ್ ಅರ್ಬನ್) ಮುಂಭಾಗ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಖಾಸಗಿ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಬೆಳಿಗ್ಗೆ ಬಸ್ ನಿಲ್ದಾಣದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಪ್ರಮುಖ ರಸ್ತೆಗಳಲ್ಲಿ ಅಮಿತ್ ಶಾ ಪ್ರತಿಕೃತಿಯ ಮೆರವಣಿಗೆ ನಡೆಸಿದರು. ಪೊಲೀಸರ ವಿರೋಧದ ನಡುವೆಯೂ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮಳಿಗೆಗಳಿಗೆ ತೆರಳಿ ಬಾಗಿಲು ಹಾಕಿಸಿದರು. ಆಟೊ ನಿಲ್ದಾಣಗಳಿಗೆ ತೆರಳಿ ಬಂದ್ ಬೆಂಬಲಿಸಲು ಮನವಿ ಮಾಡಿದರು
ಬಸ್ ಇಲ್ಲದೆ ಪ್ರಯಾಣಿಕರ ಪರದಾಟ
ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯು ನಡೆಸುತ್ತಿರುವ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳು ವಾಹನ ಸಂಚಾರ ತಡೆದಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.
ಶಾಲಾ, ಕಾಲೇಜುಗಳಿಗೆ ತೆರಳುವವರು, ಉದ್ಯೋಗಕ್ಕಾಗಿ ದೂರದ ಊರುಗಳಿಗೆ ತೆರಳುವವರು ಬಸ್ ನಿಲ್ದಾಣದಲ್ಲೇ ಬಾಕಿಯಾಗಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಆರಂಭಗೊಳ್ಳಲಿರುವ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ತೆರಳಲು ಬಂದಿದ್ದ ಆಶಾ ಕಾರ್ಯಕರ್ತೆಯರು ವಾಪಸ್ ಮನೆಗೆ ತೆರಳಿದರು.
ಹಲವಾರು ಪ್ರಯಾಣಿಕರು ರೈಲು ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದರು. ಆಟೊಗಳು ಹೆಚ್ಚಿನ ಮೊತ್ತ ಪಡೆದು ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ದೃಶ್ಯಗಳು ಕಂಡು ಬಂದವು.