ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈಗಾಗಲೇ ಭರದ ಸಿದ್ಧತೆ ಆರಂಭವಾಗಿದೆ. ಜಂಬೂ ಸವಾರಿಗೆ ಆನೆಗಳು ಸಹ ಮೈಸೂರಿಗೆ ಬಂದಾಗಿದೆ. ಇದೀಗ ಆನೆಗಳಿಗೆ ದಸರಾ ಜಂಬೂ ಸವಾರಿ ತಾಲೀಮು ಆರಂಭ ಮಾಡಲಾಗಿದೆ.
ಅಭಿಮನ್ಯುವಿಗೆ ಭಾರ ಹೊರುವ ತಾಲೀಮು: ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಂದು ಅಭಿಮನ್ಯು ಅಂಬಾರಿ ಹೊರುವುದನ್ನ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಸಾಗುವ ಅಭಿಮನ್ಯುವನ್ನ ಕಣ್ತುಂಬಿಕೊಳ್ಳಲು ಬಹಳ ಸಂತೋಷವಾಗುತ್ತದೆ. ಆದರೆ ಈ ರೀತಿ ಗಾಂಭೀರ್ಯ ನಡೆಗೆ ಬಹಳಷ್ಟು ತಾಲೂಮು ಅಗತ್ಯವಿರುತ್ತದೆ. ಅದಕ್ಕಾಗಿಯೇ ಬಹಳ ದಿನಗಳ ಮೊದಲೇ ಆನೆಗಳನ್ನ ಮೈಸೂರಿಗೆ ಕರೆತಂದು ತಾಲೀಮು ನೀಡಲಾಗುತ್ತದೆ.. ಇಂದಿನಿಂದ ಆನೆಗಳ ತಾಲೀಮು ಆರಂಭವಾಗಿದ್ದು, ಭಾರ ಹೊತ್ತು ನಡೆಯಲು ತರಬೇತಿ ನೀಡಲಾಗುತ್ತಿದೆ.
ಮೈಸೂರು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಅಭಿಮನ್ಯುವಿನ ಜೊತೆಗೆ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಹೇಮಾವತಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಮಾಡಿ, ಈ ತಾಲೀಮು ಆರಂಭ ಮಾಡಲಾಗಿದೆ. ಇದರ ನಂತರ ಅಂಬಾರಿ ಆನೆ ಅಭಿಮನ್ಯುವಿಗೆ ಸುಮಾರು 200 ಕೆ ಜಿ ತೂಕದ ಗಾದಿ, ನಮ್ದಾ, ಚಾರ್ಜಮ್ (ಕಬ್ಬಿಣದ ತೊಟ್ಟಿಲು) ಕಟ್ಟಲಾಗಿದೆ. ಇದರ ನಂತರ 300 ಕೆ ಜಿ ಯಷ್ಟು ಮರಳಿನ ಮೂಟೆಗಳನ್ನು ಸಹ ಹೊರಿಸಲಾಗಿತ್ತು, ಮೊದಲ ದಿನವೇ ಬರೋಬ್ಬರಿ 500 ಕೆಜಿ ಭಾರವನ್ನ ಹೊತ್ತು ಅಭಿಮನ್ಯು ಸಾಗಿದ್ದಾನೆ. ಈ ಅಭಿಮನ್ಯುವಿಗೆ ಕಾವೇರಿ ಮತ್ತು ಹೇಮಾವತಿ ಆನೆಗಳು ಸಾಥ್ ಕೊಟ್ಟಿವೆ.
ಇನ್ನು ಅರಮನೆಯ ಬಲರಾಮ ದ್ವಾರದ ಮೂಲಕ ಹೊರ ಬಂದ ಅಭಿಮನ್ಯು ಹಾಗೂ ಇತರ ಆನೆಗಳು ಮೈಸೂರಿನ ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಆಸ್ಪತ್ರೆ ವೃತ್ತ, ಹಳೆ ಆರ್ ಎಂ ಸಿ ವೃತ್ತ, ಹೈವೇ ವೃತ್ತದ ಮಾರ್ಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಭಾರವನ್ನ ಹೊತ್ತುಕೊಂಡು ಹೋಗಿ, ನಂತರ ಅದೇ ಮಾರ್ಗದಲ್ಲಿ ಅರಮನೆಗೆ ವಾಪಾಸ್ ಬಂದಿದ್ದು, ತಾಲೀಮು ಯಶಸ್ವಿಯಾಗಿದೆ. ಇನ್ನು ಈ ತಾಲೀಮಿನಲ್ಲಿ ಡಿಸಿಎಫ್ ಡಾ. ಪ್ರಭುಗೌಡ ಜೊತೆಗೆ ಇತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.