ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2025 ಕ್ಕೆ ಮೈಸೂರು ಸಡಗರದಿಂದ ಸಿದ್ದವಾಗುತ್ತಿದೆ. ಎರಡನೇ ತಂಡದ ದಸರಾ ಗಜಪಡೆಗೆ ಮಂಗಳವಾರ ತೂಕ ಪರಿಶೀಲನೆ ಮಾಡಲಾಗಿದ್ದು, ಇಡೀ ತಂಡದಲ್ಲಿಯೆ ಬಲಿಷ್ಠನೆನೆಸಿದ್ದ ಭೀಮನನ್ನೂ ಸುಗ್ರೀವ ಹಿಂದಿಕ್ಕಿದ್ದಾನೆ.
ಎರಡನೇ ತಂಡದ ಆನೆಗಳ ತೂಕದ ವಿವರ ಹೀಗಿದೆ.
ಹೇಮಾವತಿ 2440 ಕೆ ಜಿ ತೂಕ
ಶ್ರೀಕಂಠ 5540
ಸುಗ್ರೀವ 5545
ರೂಪ 3320
ಗೋಪಿ 4990 ಕೆ ಜಿ ತೂಕ.
ಮೊದಲ ಹಂತದ ಆನೆಗಳ ತೂಕದ ವಿವರ
ಅಭಿಮನ್ಯು – 5,360
ಧನಂಜಯ – 5,310
ಕಾವೇರಿ – 3,010
ಲಕ್ಷ್ಮೀ – 3,730
ಭೀಮ – 5,465
ಏಕಲವ್ಯ – 5,305
ಮಹೇಂದ್ರ – 5,120
ಕಂಜನ್ – 4,880
ಪ್ರಶಾಂತ – 5,110
ಸೋಮವಾರವಷ್ಟೇ ಕಾಡಿನಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಎರಡನೇ ತಂಡದ 5 ಆನೆಗಳನ್ನು ಅರಮನೆಯಲ್ಲಿ ಸ್ವಾಗತಿಸಲಾಗಿತ್ತು. ಇಂದು ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಪರಿಶೀಲನೆ ನಡೆಸಲಾಯಿತು. ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಠಿಕ ಆಹಾರವನ್ನು ಪ್ರಾರಂಭಿಸಲಾಗುವುದು ಎಂದು ಗಜಪಡೆಯ ನಿರ್ವಾಹಕರು ತಿಳಿಸಿದ್ದಾರೆ.
ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ಪ್ರಾರಂಭಿಸಲಾಗಿದ್ದು, ಬೆಳಗ್ಗೆ ಸಂಜೆ ಎರಡೂ ಹೊತ್ತು ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತಿದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ.
ಈ ಬಾರಿ ಸಹ 59 ವರ್ಷದ ಅಭಿಮನ್ಯು ಅಂಬಾರಿ ಹೊರಲಿದ್ದಾನೆ ಎಂದು ಡಿಎಸ್‌ಎಫ್ ಪ್ರಭುಗೌಡ ಮಾಹಿತಿ ನೀಡಿದ್ದಾರೆ. ಅಲ್ಲದೇ, ಈಗಾಗಲೇ ಆನೆಗಳ ಆರೋಗ್ಯ ತಪಾಸಣೆ ಆಗಿದ್ದು, ಅವುಗಳ ಹೆಲ್ತ್ ಕಾರ್ಡ್ ಅನ್ನು ದಸರಾ ಹೈ ಪವರ್ ಕಮಿಟಿಗೆ ಕಳುಹಿಸಲಾಗಿದೆ. ಅವುಗಳ ಆಧಾರದ ಮೇಲೆ ಯಾವೆಲ್ಲಾ ಆನೆಗಳು ದಸರಾದಲ್ಲಿ ಭಾಗವಹಿಸಲಿದೆ ಎಂಬುದನ್ನ ಹೈ ಪವರ್ ಕಮಿಟಿ ನಿರ್ಧಾರ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ, ನಾವು ಬ್ಯಾಕ್ ಅಪ್ ಅಪ್ಷನ್ ಆಗಿ ಬೇರೆ ಆನೆಗಳನ್ನ ಇಟ್ಟುಕೊಂಡಿರುತ್ತೇವೆ. ಮಹೇಂದ್ರ, ಪ್ರಶಾಂತ್ ಹೀಗೆ ಕೆಲ ಆನೆಗಳನ್ನ ಸಹ ಈ ಬಾರಿ ಪಟ್ಟಿ ಮಾಡಿಕೊಳ್ಳಲಾಗಿದ್ದು, ದುಬಾರೆ, ಮತ್ತಿಗೋಡು ಹಾಗೂ ಬಳ್ಳೆ ಸೇರಿದಂತೆ ಒಟ್ಟು 6 ಆನೆ ಬಿಡಾರಗಳಿಂದ ದಸರಾಗೆ ಆನೆ ಆಯ್ಕೆ ಮಾಡಲಾಗುತ್ತದೆ ಎಂದಿದ್ಧಾರೆ.
25 ಆನೆಗಳ ತಪಾಸಣೆ: ಇನ್ನು ಆನೆ ಕ್ಯಾಂಪ್ ಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಸುಮಾರು 25 ಗಂಡು ಹಾಗೂ ಹೆಣ್ಣಾನೆಗಳ ಆರೋಗ್ಯ ಪರಿಶೀಲನೆ ಮಾಡಿದ್ದಾರೆ. ಆಗಸ್ಟ್ 4ರಂದು ಗಜಪಯಣ ಆರಂಭವಾಗಲಿದೆ. ಇನ್ನು ಪ್ರತಿವರ್ಷ ಹೆಣ್ಣು ಹಾಗೂ ಗಂಡು ಆನೆಗಳಿಗೆ ವಿವಿಧ ಪರೀಕ್ಷೆಗಳನ್ನ ಮಾಡಲಾಗುತ್ತದೆ. ಮುಖ್ಯವಾಗಿ ಹೆಣ್ಣು ಆನೆಗಳಿಗೆ ಗರ್ಭಧಾರಣೆ ಪರೀಕ್ಷೆ ಕಡ್ಡಾಯವಾಗಿ ಮಾಡಲಾಗುತ್ತದೆ. ಈ ಪರೀಕ್ಷೆ ಮಾಡಲು ಆನೆ ಶಿಬಿರಗಳಲ್ಲಿರುವ ಹೆಣ್ಣಾನೆಗಳ ಮೂತ್ರ ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಿ ಟೆಸ್ಟ್ ಮಾಡಲಾಗುತ್ತದೆ. ಸದ್ಯ ಈ ಎಲ್ಲಾ ವರದಿಗಳು ಸಿದ್ದವಾಗಿದ್ದು, ಆನೆಗಳ ಪಟ್ಟಿ ಬಿಡುಗಡೆಯಾಗೋದು ಬಾಕಿ ಇದೆ.