ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-೨೦೨೩ ರ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಜನಪ್ರಿಯ ಆಹಾರ ಮೇಳವನ್ನು ಅ.೧೫ ರಿಂದ ೨೨ ರವರೆಗೆ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಎಲ್ಲಾ ವರ್ಗದ ಜನರ ಅಭಿರುಚಿಯನ್ನು ಗಮನದಲ್ಲಿರಿಸಿಕೊಂಡು ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಉಣಬಡಿಸಲು ನಿರ್ಧರಿಸಲಾಗಿದೆ. ಮೇಳದಲ್ಲಿ ದೇಶಿಯ ಮತ್ತು ಖಂಡಾಂತರ ಆಹಾರ ಪದ್ಧತಿಯ ಜೊತೆ ಪ್ರಾದೇಶಿಕ ಮತ್ತು ಹೊರ ರಾಜ್ಯಗಳ ವೈವಿಧ್ಯದ ಉಟೋಪಚಾರಗಳೂ ಇರಲಿವೆ. ಸಮಕಾಲೀನ ಆಹಾರ ಅಭ್ಯಾಸಗಳು ಮತ್ತು ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿಕೊಂಡು ಸಹಜ, ನೈಸರ್ಗಿಕ, ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯಗಳು, ಹಣ್ಣು-ಹಂಪಲು, ತರಕಾರಿ ಕಾಯಿ ಪಲ್ಯಗಳಿಂದ ತಯಾರಿಸಿದ ಅಡುಗೆಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಆಹಾರ ಮೇಳದಲ್ಲಿ ಉಣಬಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಸಿರಿಧಾನ್ಯ ಬೆಳೆಗಾರರು, ಸಹಜ ಮತ್ತು ನೈಸರ್ಗಿಕ ಕೃಷಿಕರು, ಸಾವಯವ ಕೃಷಿಕರು ಹಾಗೂ ಸಿರಿಧಾನ್ಯ ಬೆಳೆಗಾರರ ಸಂಘಗಳು ಮತ್ತು ಒಕ್ಕೂಟಗಳು ಆಹಾರ ಮೇಳಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ಸಿರಿಧಾನ್ಯ ಅಡುಗೆ ತಯಾರಿಸಲು, ಸಹಜ ಮತ್ತು ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು ಮತ್ತು ತರಕಾರಿ ಮಾರಾಟಗಾರರುಗಳಿಗೆ ಎರಡು ಆಹಾರ ಮೇಳಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.
ವಿವಿಧ ಶೈಲಿಯ ಆಹಾರ ಪದ್ದತಿಗಳು: ಆಹಾರ ಮೇಳದಲ್ಲಿ ದಕ್ಷಿಣ ಕರ್ನಾಟಕ ಆಹಾರ ಪದ್ಧತಿ, ಉತ್ತರ ಕರ್ನಾಟಕ ಆಹಾರ ಪದ್ಧತಿ, ಟಿಬೆಟಿಯನ್ ಆಹಾರ ಪದ್ಧತಿ, ಹೊರ ರಾಜ್ಯದ ಆಹಾರ ಪದ್ಧತಿಯಡಿಯಲ್ಲಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಪದ್ಧತಿ, ಆಂಧ್ರ ಶೈಲಿ, ಕೇರಳ ಶೈಲಿ, ತಮಿಳುನಾಡು ಶೈಲಿ, ಮರಾಠಿ ಶೈಲಿಯಲ್ಲಿನ ಸಸ್ಯಾಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ ಶೈಲಿಯ ಜೊತೆಗೆ ಅಂತರ್‌ರಾಷ್ಟ್ರೀಯ ಚೈನೀಸ್ ಆಹಾರ ಪದ್ಧತಿ ಶೈಲಿ, ಇಟಾಲಿಯನ್ ಆಹಾರ ಪದ್ಧತಿ ಶೈಲಿ, ಫ್ರೆಂಚ್ ಆಹಾರ ಪದ್ಧತಿ ಹಾಗೂ ಆಫ್ರಿಕನ್ ಆಹಾರ ಪದ್ಧತಿಯಡಿಯಲ್ಲಿ ಆಹಾರ ತಯಾರಿಸುವ ಅಡುಗೆಗಳು ಮತ್ತು ಸಿರಿಧಾನ್ಯ ಮತ್ತು ಸಹಜ ಹಾಗೂ ಸಾವಯವ ಧಾನ್ಯಗಳು ಮತ್ತು ತರಕಾರಿಗಳಲ್ಲಿ ಅಡುಗೆಗಳನ್ನು ಮಾಡುವ ವ್ಯಕ್ತಿಗಳು, ಗೃಹಿಣಿಯರು, ಹೋಟೆಲ್‌ಗಳು ಹಾಗೂ ಸಂಘ ಸಂಸ್ಥೆಗಳು, ಹೋಟೆಲ್‌ರವರು, ರೆಸ್ಟೊರೆಂಟ್‌ನವರು ಮತ್ತು ಇತರೆಯವರು ಭಾಗವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪಾರಂಪರಿಕ ಶೈಲಿಯಲ್ಲಿ ವಿಶೇಷ ಆಹಾರ ತಯಾರಿಸುವವರು, ವಿಶೇಷ ರುಚಿ ಅಥವಾ ಹೊಸ ತರಹದ ರುಚಿ ಹೊಂದಿರುವ ಆಹಾರ ತಯಾರಕರು ಮೇಳದಲ್ಲಿ ಭಾಗವಹಿಸಿ ತಮ್ಮ ಖಾದ್ಯವನ್ನು ಸಾರ್ವಜನಿಕರಿಗೆ ಉಣಬಡಿಸಬಹುದು. ತಾವು ತಯಾರಿಸುವ ಖಾದ್ಯವು ಜನರನ್ನು ಆಕರ್ಷಿಸಿ ‘ಮೈಸೂರು ಪಾಕ್’ ಸಿಹಿಯಂತೆ ವಿಶ್ವವಿಖ್ಯಾತಿ ಪಡೆಯುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು ಮೈಸೂರು ದಸರಾ ಮಹೋತ್ಸವವನ್ನು ಹೆಚ್ಚಿನ ರೀತಿಯಲ್ಲಿ ಪ್ರಖ್ಯಾತಿಗೊಳಿಸುವಂತೆ ಮನವಿ ಮಾಡಲಾಗಿದೆ. ಅರ್ಜಿಗಳನ್ನು ಅ.೦೯ ರವರೆಗೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಅ ೦೯ ಕೊನೆಯ ದಿನಾಂಕ. ಸಿದ್ದಾರ್ಥನಗರದ ಹೊಸ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣದ ೨ನೇ ಮಹಡಿಯಲ್ಲಿನ ರೂಂ ನಂ.೨೨೭ ರಲ್ಲಿ ಅರ್ಜಿಗಳನ್ನು ನೀಡಲಾಗುವುದು ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಆಹಾರ ಮೇಳ ಉಪಸಮಿತಿ, ಕಾರ್ಯಾಧ್ಯಕ್ಷ ಕುಮುದ ಶರತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಆಹಾರ ಮೇಳ ಉಪಸಮಿತಿ ಕಾರ್ಯದರ್ಶಿಗಳಾದ ಯು.ಆರ್.ರಮೇಶ್, ಹಾಗೂ ವ್ಯವಸ್ಥಾಪಕರಾದ ಮೋಹನ್.ಬಿ.ಸಿ., ದೂ.ಸಂ: ೯೪೪೮೩೪೩೫೦೯, ಕುಮಾರ್ ದೂ.ಸಂ: ೯೯೦೨೨೪೮೬೧೯, ಸುರೇಶ್ ದೂ.ಸಂ: ೮೭೨೨೧೦೪೦೫೨, ನವೀನ್ ದೂ.ಸಂ: ೭೪೦೬೯೮೩೭೬೭, ಮಾದೇಗೌಡ ದೂ.ಸಂ: ೮೯೦೯೩೯೫೩೩, ಶಶಿಧರನಾಯಕ ದೂ.ಸಂ: ೯೬೩೨೯೬೦೬೧೫ ಹಾಗೂ ಕಛೇರಿಯ ದೂರವಾಣಿ ಸಂಖ್ಯೆ : ೦೮೨೧-೨೪೨೨೧೦೭ ಮತ್ತು ಇ-ಮೇಲ್ ಐಡಿ ddfoodmysore@gmail.com ಸಂಪರ್ಕಿಸಬಹುದು.
ವಿಶೇಷ ಸೂಚನೆ : ಸಾಫ್ಟ್ ಡ್ರಿಂಕ್ಸ್, ಐಸ್‌ಕ್ರಿಂ ಮತ್ತು ಮಿನರಲ್ ವಾಟರ್ ಪದಾರ್ಥಗಳಿಗೆ ಪ್ರಾಯೋಜಕತ್ವ ಇರುವುದರಿಂದ ಈ ಪದಾರ್ಥಗಳಿಗೆ ಅರ್ಜಿಗಳ ವಿತರಣೆ ಇರುವುದಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಆಹಾರ ಮೇಳ ಉಪಸಮಿತಿ, ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.