ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ರಲ್ಲಿ ಪಾಲ್ಗೊಳ್ಳಲು ದಸರಾ ಗಜಪಡೆ ಮೈಸೂರು ಆಗಮನಕ್ಕೆ ಎರಡು ವಾರ ಮಾತ್ರ ಬಾಕಿ ಇದೆ. ನಾಡಹಬ್ಬ ದಸರಾಗೆ ದಿನ ಗಣನೆ ಆರಂಭವಾಗುತ್ತಿರುವoತೆಯೇ ಗಜಪಡೆ ಬರ ಮಾಡಿಕೊಳ್ಳಲು ಅರಮನೆಯಲ್ಲಿ ಸಿದ್ಧತೆ ಆರಂಭಗೊoಡಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಹುಣಸೂರು ಬಳಿಯ ವೀರನಹೊಸಹಳ್ಳಿಯಿಂದ ಸೆ.೧ರಂದು ಗಜ ಪಡೆಗಳ ಪಯಣಕ್ಕೆ ಚಾಲನೆ ನೀಡಲಾಗುವುದು. ಸೆ.೧ರಂದು ಹೊರಟ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ೯ ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಡಲಿವೆ.
ಬಳಿಕ ಸೆ.೪ರಂದು ಸಾಂಪ್ರದಾಯಿಕವಾಗಿ ವಿಖ್ಯಾತ ಮೈಸೂರು ಅರಮನೆ ಆವರಣ ಪ್ರವೇಶಿಸಲಿದೆ. ಹೀಗಾಗಿ ಗಜಪಡೆಯ ವಾಸ್ತವ್ಯಕ್ಕಾಗಿ ಆರಮನೆ ಆವರಣದಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಶೆಡ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಮೊದಲ ತಂಡದಲ್ಲಿ ೯ ಆನೆಗಳು ಆಗಮಿಸಲಿದ್ದು, ಎರಡನೇ ತಂಡದಲ್ಲಿ ಐದು ಆನೆಗಳು ಆಗಮಿಸಲಿವೆ. ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಕೂಡ ಬರಲಿದ್ದಾರೆ.
ದಸರಾ ಮಹೋತ್ಸವಕ್ಕೆ ಆಗಮಿಸುವ ಗಜಪಡೆಗಳ ಆಗಮನಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ ಎಂದು ಡಿಸಿಎಫ್ ಸೌರಭ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಕಳೆದ ಬಾರಿ ದಸರಾದಲ್ಲಿ ಭಾಗವಹಿಸಿದ್ದ ೮ ಆನೆಗಳು ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ. ಹೊಸದಾಗಿ ೩ ಆನೆಗಳು ಈ ಬಾರಿಯ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಮೊದಲ ಮತ್ತು ಎರಡನೇ ಹಂತದಲ್ಲಿ ಯಾವ ಯಾವ ಆನೆಗಳು ಬರಲಿವೆ ಎಂಬ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಬಂಡಿಪುರದ ರಾಂಪುರ, ನಾಗರಹೊಳೆಯ ದುಬಾರೆ, ಮತ್ತಿಕಟ್ಟೆ ಆನೆ ಶಿಬಿರಾಗಳಿಂದ ಗಜ ಪಡೆಯ ಆಯ್ಕೆ ಪ್ರಕ್ರಿಯೆ ನಡೆದಿದ್ದು, ದಸರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಹೆಣ್ಣು ಆನೆಗಳ ಗರ್ಭ ಪರೀಕ್ಷೆಯೂ ನಡೆದಿದೆ. ಗರ್ಭ ಧರಿಸಿದ ಆನೆಗಳನ್ನೂ ಕರೆತರುವುದಿಲ್ಲ ಎಂದು ಮಾಹಿತಿ ನೀಡಿದರು. ಅರಮನೆ ಮೈದಾನದಲ್ಲಿ ಎಂದಿನಂತೆ ಆನೆಗಳಿಗೆ ಶೆಡ್ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ಆನೆಗಳ ಆಹಾರದಲ್ಲಿ ಎಂದಿನಂತೆ ಹಿಂದೆ ಇದ್ದ ಮೆನುಗಳೆ ಮುಂದುವರೆಯಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಎಲ್ಲಾ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ತಿಳಿಸಿದರು.