Monday, April 21, 2025
Google search engine

Homeಸ್ಥಳೀಯಅ.16ಕ್ಕೆ ನಟಿ ಮಿಲನ ನಾಗರಾಜ್‌ರಿಂದ ಚಲನಚಿತ್ರೋತ್ಸವ ಉದ್ಘಾಟನೆ

ಅ.16ಕ್ಕೆ ನಟಿ ಮಿಲನ ನಾಗರಾಜ್‌ರಿಂದ ಚಲನಚಿತ್ರೋತ್ಸವ ಉದ್ಘಾಟನೆ

ಮೈಸೂರು: ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿಯಿಂದ ಅ. ೧೬ ರಂದು ಬೆಳಗ್ಗೆ ೯:೩೦ಕ್ಕೆ ನಗರದ ಮಾಲ್ ಆಫ್ ಮೈಸೂರ್‌ನ ಐನಾಕ್ಸ್‌ನಲ್ಲಿ ಚಲನಚಿತ್ರೋತ್ಸವನ್ನು ಚಂದನವನದ ನಟಿ ಮಿಲನ ನಾಗರಾಜ್ ಉದ್ಘಾಟಿಸಲಿದ್ದಾರೆ.

ಚಲನಚಿತ್ರೋತ್ಸವದ ಪ್ರಯುಕ್ತ ಸೆಲ್ಫಿ ಸ್ಟಿಕ್ ಸ್ಪರ್ಧೆಯನ್ನು ಏರ್ಪಡಿಸಿದ್ದು, ನಗರದ ಮಾಲ್ ಆಫ್ ಮೈಸೂರ್‌ನ ಐನಾಕ್ಸ್ ಹಾಗೂ ಬಿ.ಎಮ್.ಹೆಚ್‌ನ ಡಿ.ಆರ್.ಸಿ ಯಲ್ಲಿರುವ ಸೆಲ್ಫಿ ಸ್ಟ್ಯಾಂಡ್‌ಗಳಲ್ಲಿ ಸೆಲ್ಫಿ ತೆಗೆದು @MYDFF2023 ಪೇಜ್‌ಗೆ ಟ್ಯಾಗ್ ಮಾಡುವ ಮೂಲಕ ಸೆಲ್ಫಿಸ್ಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಉತ್ತಮವಾದ ಮೂರು ಸೆಲ್ಫಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಇಂದು ದಸರಾ ಚಲನಚಿತ್ರೋತ್ಸವ ಉಪ ಸಮಿತಿಯ ಉಪ ವಿಶೇಷಾಧಿಕಾರಿಗಳಾದ ಎಮ್.ಕೆ ಸವಿತಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಸರಾ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ದಸರಾ ಮಹೋತ್ಸವದ ಆಚರಣೆಯಲ್ಲಿ ಸುರಕ್ಷತೆಯ ಕಡೆಗೂ ಗಮನವಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಅರಮನೆ ಮಂಡಳಿ ಕಚೇರಿಯಲ್ಲಿ ಇಂದು ನಡೆದ ದಸರಾ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ವಿಪತ್ತು ಪರಿಸ್ಥಿತಿ ನಿರ್ವಹಣಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ನಗರದ ಸ್ವಚ್ಚತೆ ಕಾರ್ಯ ಮತ್ತಷ್ಟು ಚುರುಕುಗೊಳ್ಳಬೇಕು. ಎಲ್ಲಿಯೂ ವಿದ್ಯುತ್ ಅವಘಡಗಳಾಗದಂತೆ ಎಚ್ಚರಿಕೆ ವಹಿಸಬೇಕು. ಪಟಾಕಿ ದಾಸ್ತಾನುಗಳಿರುವ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಪರಿಶೀಲಿಸಬೇಕು ಎಂದರು.

ಮುಂದುವರೆದು, ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತಿದ್ದು, ಕೆಲಸ ಚುರುಕುಗೊಳ್ಳಬೇಕು. ವಿವಿಧ ಉಪಸಮಿತಿಗಳು ತಮ್ಮ ಕಾರ್ಯಕ್ರಮ ಆಯೋಜನೆ ಮಾಡುವ ಮನ್ನ ಸಂಬಂಧಿಸಿದ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದುಕೊಳ್ಳುವುದು ಮುಖ್ಯ. ರಸ್ತೆ ಚರಂಡಿಗಳನ್ನು ಕೂಡಲೆ ದುರಸ್ತಿ ಪಡಿಸಿ, ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅವರುಗಳ ಸುರಕ್ಷತೆಗೂ ಹೆಚ್ಚಿನ ಗಮನಹರಿಸಬೇಕು ಎಂದರು.

ದಸರಾ ದೀಪಾಲಂಕಾರ ಆಕರ್ಷಕವಾಗಿರುವುದರೊಂದಿಗೆ ರಸ್ತೆಗಳ ಸೌಂದರೀಕರಣಕ್ಕೂ ಒತ್ತು ನೀಡಿ, ಕುಸ್ತಿಪಟುಗಳಿಗೆ ಉತ್ತಮ ಗೌರವ ಧನ ನೀಡಿ. ಚಲನ ಚಿತ್ರೋತ್ಸವವನ್ನು ಹೆಚ್ಚು ಜನ ವೀಕ್ಷಿಸುವಂತೆ ಆಯೋಜನೆ ಮಾಡಿ. ಆಹಾರ ಮೇಳದಲ್ಲಿ ಎಲ್ಲಾ ಭಾಗಗಳ ಆಹಾರ ಮಳಿಗೆಗಳು ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ವೇಳೆ, ದಸರಾ ಉತ್ಸವಕ್ಕೆ ೧ ಕೋಟಿ ರೂ ನೀಡಿ ಪ್ಲಾಟಿನಂ ಪ್ರಾಯೋಜಕರಾಗಲು ಒಪ್ಪಿರುವ ಸೈಕಲ್ ಬ್ರಾಂಡ್ ಅಗರಬತ್ತಿ ಕಂಪನಿ ಹಾಗೂ ಸಿಲ್ವರ್ ಪ್ರಾಯೋಜಕತ್ವ ನೀಡಿಲಿರುವ ಎಸ್.ಬಿ.ಐ.ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಧನ್ಯವಾದ ಹೇಳಲಾಯಿತು. ಸಭೆಯಲ್ಲಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿ.ಪಂ.ಸಿಇಒ ಗಾಯತ್ರಿ ಕೆ.ಎಂ. ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular