ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ಆರಂಭಗೊಂಡಿದೆ. ನೆನ್ನೆಯಷ್ಟೇ (ಬುಧವಾರ) ವೀರನಹೊಸಹಳ್ಳಿ ಗೇಟ್‌ನಲ್ಲಿ ದಸರಾ ಗಜಪಡೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಜಿಲ್ಲಾ ಸಚಿವ ಡಾ. ಎಚ್ಸಿ ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಗಜಪಯಣಕ್ಕೆ ಚಾಲನೆ ನೀಡಿದ್ದರು. ನಂತರ ಗಜಪಡೆ ಅಶೋಕಪುರಂ ಅರಣ್ಯ ಭವನಕ್ಕೆ ತೆರಳಿತ್ತು. ಸದ್ಯ ಮೈಸೂರಿನ ಅರಣ್ಯ ಭವನದಲ್ಲಿರುವ ಅಭಿಮನ್ಯು ನೇತೃತ್ವದ 9 ಆನೆಗಳು ರಿಲ್ಯಾಕ್ಸ್ ಮೂಡ್ನಲ್ಲಿವೆ.
ಮೈಸೂರಿನ ಅಶೋಕಪುರಂ ಅರಣ್ಯ ಭವನದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳ ಹಾಗೂ ಅವುಗಳ ಮಾವುತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಆನೆಗಳಿಗೆ ಅರಣ್ಯ ಭವನದಲ್ಲೇ ಆಹಾರ, ವಾಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.
ಶುಕ್ರವಾರ ಗಜಪಡೆ ಅರಣ್ಯ ಭವನದಿಂದ ಅರಮನೆಗೆ ತೆರಳಲಿದೆ. ಅರಣ್ಯ ಭವನದಿಂದ ನಡಿಗೆ ಮೂಲಕ ಅರಮನೆಗೆ ಆನೆಗಳ ತಂಡ ತೆರಳಲಿದೆ. ನಂತರ ಆನೆಗಳ ತರಬೇತಿ ಪ್ರಕ್ರಿಯೆ ಆರಂಭವಾಗಲಿದೆ. ಸದ್ಯ 9 ಆನೆಗಳ ತಂಡ ಇದ್ದು, ಎರಡನೇ ಹಂತದಲ್ಲಿ 5 ಆನೆಗಳು ಮೈಸೂರಿಗೆ ಆಗಮಿಸಲಿವೆ.