ಧಾರವಾಡ : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅ.24 ರಂದು ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ‘ಧಾರವಾಡಿ ತಳಿ ಎಮ್ಮೆ, ನಮ್ಮ ಹೆಮ್ಮೆ’ ಟ್ಯಾಗ್‍ಲೈನ್ ಹೊಂದಿದ್ದ ಧಾರವಾಡ ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ದೇಶ ವಿದೇಶಿಯರ ಗಮನ ಸೆಳೆದಿದೆ. ಪ್ರಸಕ್ತ ಸಾಲಿನ ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 31 ಹಾಗೂ ಇತರ ಇಲಾಖೆಗಳ 18 ಸೇರಿ ಒಟ್ಟು 49 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು.
ಇವುಗಳಲ್ಲಿ ಆಕರ್ಷಕವಾಗಿ ಮತ್ತು ಅರ್ಥಪೂರ್ಣವಾಗಿ ರೂಪುಗೊಂಡಿದ್ದ ಧಾರವಾಡ ಪೇಡಾ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆಯಿತು. ಮತ್ತು ಸ್ತಬ್ಧಚಿತ್ರಕ್ಕೆ ನೀಡಿದ ‘ಧಾರವಾಡಿ ತಳಿ ಎಮ್ಮೆ, ನಮ್ಮ ಹೆಮ್ಮೆ’ ಟ್ಯಾಗ್‍ಲೈನ್ ನೋಡುಗರನ್ನು ಆಕರ್ಷಿಸಿತು. ಸುಮಾರು 7 ಕಿ.ಮೀ. ಉದ್ದದ ಜಂಬೂಸವಾರಿ ಮೆರವಣಿಗೆಯಲ್ಲಿ ಧಾರವಾಡ ಪೇಡೆಯ ರೂಪಕ ಹೊತ್ತ ಸ್ತಬ್ಧಚಿತ್ರವು ಮೆರವಣಿಗೆಯುದ್ದಕ್ಕೂ ನೆರೆದ ಜನರ ಗಮನ ಸೆಳೆಯಿತು.ಜಿಲ್ಲಾ ಪಂಚಾಯತಿಯ ಸುಮಾರು 7.80 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಈ ಸ್ತಬ್ಧಚಿತ್ರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ನೀಡಿದ್ದ ಪರಿಕಲ್ಪನೆ ಹಾಗೂ ವಿಷಯ ವಸ್ತುವಿನ ಆಧಾರದ ಮೇಲೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೈ ಕುಸುರಿ ಕಲಾವಿದ ಶಶಿಧರ ಗರಗ ಅವರು ಮೈಸೂರು ಹೊರವಲಯದ ಆರ್.ಎಂ.ಸಿ.ಯ ಬಂಡಿಪಾಳ್ಯದಲ್ಲಿ ಸತತ 12 ದಿನಗಳ ಕಾಲ ತಮ್ಮ ಕೈ ಕಲಾ ಚಳಕದಲ್ಲಿ ನಿರ್ಮಿಸಿದ್ದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಎ.ಎ. ತಹಶೀಲ್ದಾರ ಮತ್ತು ಹುಬ್ಬಳ್ಳಿಯ ಕೈಗಾರಿಕಾ ವಿಸ್ತರಣಾ ಅಧಿಕಾರಿ ಶಿವಾನಂದ ಕಮ್ಮಾರ ಅವರ ಮಾರ್ಗದರ್ಶನದಲ್ಲಿ ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು. ಸ್ತಬ್ಧಚಿತ್ರ ನಿರ್ಮಾಣದಲ್ಲಿ ಪಿ.ಓ.ಪಿ., ಬಿದಿರು, ಬೊಂಬು, ಫ್ಲೈವುಡ್, ಥರ್ಮಾಕೊಲ್ ಮತ್ತು ಪೇಂಟ್ ಬಳಸಿ ಕಲಾವಿದ ತಮ್ಮ ಕೈಯಿಂದ ಸ್ವತಃ ತಯಾರಿಸಿದ್ದರು. ಇದರಲ್ಲಿ ಯಾವುದೇ ಕೃತಕ ರೂಪಕ, ವಸ್ತುಗಳನ್ನು ಬಳಸಿರಲಿಲ್ಲ.
ಸ್ತಬ್ಧಚಿತ್ರದ ಆಯ್ಕೆ ಸಮಿತಿ ಪ್ರತಿನಿತ್ಯ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ನಿಗಾವಹಿಸುತ್ತದೆ. ಪ್ರಶಸ್ತಿ ಆಯ್ಕೆಗೆ ಸ್ತಬ್ಧಚಿತ್ರಕ್ಕೆ ಬಳಸಿದ ಕೈ ಕಲೆ, ಪರಿಕಲ್ಪನೆ (ಥೀಮ್) ಮತ್ತು ರೂಪಿಸಿದ ಆಕೃತಿಗಳು ಸೇರಿ ಒಟ್ಟಾರೆ ರೂಪಕ ಗಣನೆಗೆ ಬರುತ್ತದೆ. ಸಾಹಿತ್ಯ, ಸಂಸ್ಕøತಿಯೊಂದಿಗೆ ಧಾರವಾಡಕ್ಕೆ ಕೀರ್ತಿ ತಂದ ಧಾರವಾಡ ಪೇಡಾ ಮತ್ತು ಧಾರವಾಡ ಎಮ್ಮೆ ತಳಿಗಳ ಬಗ್ಗೆ ಹೆಚ್ಚು ಪ್ರಚುರ ಪಡಿಸುವ ಉದ್ದೇಶದಿಂದ ಈ ಸ್ತಬ್ಧಚಿತ್ರ ರೂಪಿಸಲಾಗಿತ್ತು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಖುಷಿ ತಂದಿದೆ. ಪ್ರಥಮ ಸ್ಥಾನ ಬಂದಿರುವುದು ಜಿಲ್ಲೆಗೆ ಹೆಮ್ಮೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಸಂತಸ ವ್ಯಕ್ತಪಡಿಸಿದ್ದಾರೆ.
