ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇರುವಂತೆ, ದಸರಾ ಉದ್ಘಾಟಕರ ಹೆಸರು ಅಂತಿಮಗೊಳಿಸಲಾಗಿದೆ. ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ.
ಮೈಸೂರು ದಸರಾ 2024 ಉದ್ಘಾಟನೆಗೆ ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯರನ್ನು ಆಹ್ವಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ದಸರಾ ಉದ್ಘಾಟನೆಗೆ ಹಲವರ ಹೆಸರುಗಳು ಚರ್ಚೆಗೆ ಬಂದಿದ್ದವು. ಈ ಎಲ್ಲಾ ಚರ್ಚೆಗಳ ನಡುವೆ ಸಿಎಂ ಸಿದ್ದರಾಮಯ್ಯನವರೇ ನಾಡಿನ ಹಿರಿಯ ಸಾಹಿತಿ ಪ್ರೊ.ಹಂ.ಪ. ನಾಗರಾಜಯ್ಯ ಅವರನ್ನು ಉದ್ಘಾಟಕರಾಗಿ ಕರೆಸಿದರೆ ಹೇಗೆ ಎಂಬ ಪ್ರಸ್ತಾಪ ಮಾಡಿದ್ದರು. ಹಂಪನಾ ಜೈನ ಸಮುದಾಯಕ್ಕೆ ಸೇರಿದವರಾಗಿದ್ದು, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಹಿರಿಯ ತಲೆಮಾರಿನ ಸಾಹಿತಿ ಎನ್ನುವ ದೃಷ್ಟಿಕೋನದಿಂದ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಲು ಸಿಎಂ ಸಿದ್ದರಾಮಯ್ಯ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು. ಈಗ ಅದರಂತೆ ಹಂಪನಾ ಅವರನ್ನೇ ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಂ.ಪ.ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ. ‘ಹಂಪನಾ’ ಕಾವ್ಯನಾಮದಿಂದ ಬರೆಯುವ ನಾಗರಾಜಯ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಎಂಬ ಗ್ರಾಮದಲ್ಲಿ ಅ.7, 1936 ರಲ್ಲಿ ಶಾನುಬೋಗ ಪದ್ಮನಾಭಯ್ಯ – ಪದ್ಮಾವತಮ್ಮ ದಂಪತಿಯ ಪುತ್ರರಾಗಿ ಜನಿಸಿದರು.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ನಂತರ ಮಂಡ್ಯ, ದಾವಣಗೆರೆ, ಶಿವಮೊಗ್ಗ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದರು. ಸೆಂಟ್ರಲ್ ಕಾಲೇಜಿಗೆ ಸೇರಿದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಮೌಲಿಕ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ.
ಇದರ ಜತೆಗೆ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಹಂಪನಾ ಅವರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ತಮ್ಮಣರಾವ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಜೋಶಿ ಪ್ರಶಸ್ತಿ, ಆಚಾರ್ಯ ಸುಮತಿ ಸಾಗರ ಶ್ರುತ ಸಂವರ್ಧನ ಪುರಸ್ಕಾರಗಳು ಸಂದಿವೆ.