ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿಗೆ ಚಾಲನೆ
ಮೈಸೂರು: ಮೈಸೂರು ದಸರಾ ವಿಶ್ವಕ್ಕೆ ಒಂದು ಪರಂಪರೆಯನ್ನು ತೋರಿಸುತ್ತದೆ ಎಂದು ಪುರತತ್ವ ಸಂಗ್ರಹಾಲಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜು ಅವರು ಹೇಳಿದರು.
ಇಂದು ರಂಗಚಾರ್ಲು ಪುರಭವನ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೈಸೂರಿನಲ್ಲಿ ಪಾರಂಪರಿಕವಾಗಿ, ಸಾಂಸ್ಕೃತಿಕವಾಗಿ ಸಾಕಷ್ಟು ವಿಚಾರಗಳಿವೆ. ಇಂದಿನ ಮಕ್ಕಳಿಗೆ ಪಾರಂಪರಿಕ ವಿಚಾರಗಳು ಪರಿಚಯ ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಿದೆ. ಅದನ್ನು ಯಾವ ರೀತಿ ಪರಿಚಯ ಮಾಡಬೇಕು ವಿಶೇಷವಾಗಿ ವಿಭಿನ್ನವಾಗಿ ಪರಿಚಯ ಮಾಡಬೇಕು ಎನ್ನುವುದು ನಮ್ಮ ಕಾರ್ಯವೈಕರಿಗೆ ಬಿಟ್ಟಿರುವ ವಿಚಾರವಾಗಿದೆ ಎಂದು ಹೇಳಿದರು.
ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಬ್ರಾಂಡ್ ಮೈಸೂರು ಎನ್ನುವ ಹೆಸರಿನಲ್ಲಿ ವಸ್ತು ಪ್ರದರ್ಶನವನ್ನು ಉದ್ಘಾಟನೆ ಮಾಡಿ, ಅದರಲ್ಲಿ ಮೈಸೂರು ಜಿಲ್ಲೆಯ ವಿಶೇಷ ಪಾರಂಪರಿಕ ಸ್ಮಾರಕಗಳು ಕಟ್ಟಡಗಳು ದಿನಸಿಗಳು, ಮೈಸೂರ್ ಸ್ಯಾಂಡಲ್ ಸೋಪ್, ಮೈಸೂರ್ ಸಿಲ್ಕ್, ಚನ್ನಪಟ್ಟಣ ಗೊಂಬೆಗಳನ್ನು ಇಡಲಾಗಿದ್ದು. ನಮ್ಮ ಇಲಾಖೆಯ ಪರವಾಗಿ ಸುಮಾರು ೧೩ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಮೈಸೂರು ದಸರಾ ೧೦ ದಿನಗಳ ಕಾಲ ನಡೆಯುವ ಹಬ್ಬವಾಗಿದೆ ಮೈಸೂರಿಗರು ಮತ್ತು ಹೊರಗಿನವರು ಕಣ್ತುಂಬಿಕೊಳ್ಳಬಹುದು. ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನಮ್ಮೆಲ್ಲರಿಗೂ ಹೆಮ್ಮೆ ಅದರಲ್ಲೂ ನಮ್ಮ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಾಕಷ್ಟು ವಿಚಾರ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ. ಕರ್ನಾಟಕ ರಾಜ್ಯ ಕಲೆ ಸಂಸ್ಕೃತಿ ಇವುಗಳ ಸಮೀಕ್ಷೆ ಮಾಡುವುದರ ಜೊತೆ ಬೆಳೆಸುವುದಕ್ಕೆ ಪ್ರೋತ್ಸಾಹ ನೀಡುವುದಕ್ಕೆ ಸಾಕಷ್ಟು ವಿಭಿನ್ನ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
೧೮೮೫ ರಲ್ಲಿ ಪ್ರಾರಂಭವಾದ ನಮ್ಮ ಇಲಾಖೆ ಸ್ಥಳೀಯರಿಗೆ ಏರ್ಟೆಲ್ ಮೂಲಕ ಪರಿಚಯವಾಗಿದೆ ಹಾಗೆ ಈ ಬಾರಿ ಎರಿಟೇಜ್ ಮೂಲಕ ಜಾವಾ ಬೈಕ್ ಸವಾರಿ ಮಾಡುವುದರ ಜೊತೆ ಇನ್ನು ವಿಭಿನ್ನ ವಿಶಿಷ್ಟತೆಗಳಿಂದ ಜನರ ಗಮನ ಸೆಳೆದು ನಮ್ಮ ಪರಂಪರೆ ಕಟ್ಟಡಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡೋಣ ಎನ್ನುವ ರೀತಿಯಲ್ಲಿ ಈ ಬಾರಿ ಬೈಕ್ ಸವಾರಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿಯನ್ನು ನೀಡಿದರು.
ಇಲಾಖೆಯಿಂದ ಜಿಲ್ಲಾ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳ ಹಾಗೂ ಪರಂಪರೆಯ ಪರಿಚಯ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಹೆರಿಟೇಜ್ ಕ್ಲಬ್ ಎನ್ನುವ ಕಾರ್ಯಕ್ರಮವನ್ನು ತರುವ ಮೂಲಕ ಪರಂಪರೆಗಳ ಬಗ್ಗೆ ಅಭಿಯಾನ ಮೂಡಿಸುವ ಪ್ರಯತ್ನವನ್ನು ಸಹ ಮಾಡುತ್ತಿದ್ದೇವೆ ಎಂದು ಹೇಳಿದರು.
ಪಾದೇಶಿಕ ಆಯುಕ್ತರಾದ ರಮೇಶ್ ಡಿ.ಎಸ್ ಅವರು ಮಾತನಾಡಿ, ಪರಂಪರೆ ಎಂದರೆ ನಾವು ಬೆಳೆದು ಬಂದ ದಾರಿ. ಆ ದಾರಿ ಯಾವ ಕಾರಣಕ್ಕೆ ಯಾವ ಕಾಲದಲ್ಲಿ ಸೃಷ್ಟಿ ಆಗಿತ್ತು, ಯಾವ ಕಾರಣಕ್ಕೆ ಸೃಷ್ಟಿಯಾಯಿತು, ಅದರ ಉದ್ದೇಶ ಏನು ಹಾಗೂ ಅದರ ಚರಿತ್ರೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ವಿಶೇಷವಾಗಿ ಪಾರಂಪರಿಕ ಕಟ್ಟಡಗಳು ಸ್ಮಾರಕಗಳಿಗೆ ಸಂಬಂಧಿಸಿದಂತೆ ಇವು ಯಾವ ಕಾರಣಕ್ಕಾಗಿ ಯಾವ ಕಾಲದಲ್ಲಿ ಸ್ಥಾಪಿಸಲಾಯಿತು ಎಂದು ತಿಳಿದುಕೊಳ್ಳಬೇಕು ಎಂದರು.
ಜಾವಾ ಮೋಟಾರ್ ಬೈಕ್ ಸವಾರಿಯು ಪುರಭವನದಿಂದ ಹೊರಟು ದೊಡ್ಡ ಗಡಿಯಾರ, ಚಾಮರಾಜ ಒಡೆಯರ್ ವೃತ್ತ, ಕೆ.ಆರ್.ಸರ್ಕಲ್, ಬನುಮಯ್ಯ ಕಾಲೇಜು, ಕಾಡಾ ಕಛೇರಿ, ಹಾರ್ಡಿಂಗ್ ಸರ್ಕಲ್, ಎಸ್.ಐ..ಆರ್.ಡಿ ಲಲಿತಮಹಲ್, ಟೇರಿಷಿಯನ್ ಕಾಲೇಜು, ಪಿ.ಟಿ.ಸರ್ಕಲ್, ವಸಂತ ಮಹಲ್ ಮತ್ತು ಪುರಾತತ್ವ ಇಲಾಖೆಯನ್ನು ತಲುಪಿತು.
ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ನಿರ್ದೇಶಕರಾದ ಅಮಿತ್ ಪಾಂಡೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಯನದ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಸರ್ವಪಿಳ್ಳೆ ಅಯ್ಯಂಗರ್ ಮತ್ತು ಹಿರಿಯರಾದ ಎಸ್.ಎಸ್ ರಂಗರಾಜು ಅವರು ಉಪಸ್ಥಿತರಿದ್ದರು.