ಮೈಸೂರು: ಮೈಸೂರು ಮಹಾರಾಜರಿಗೆ ನಾಡಿನ ಬಗ್ಗೆ ಇದ್ದ ಅಭಿಮಾನವೇ ಕಾರಣ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್. ಕೆ ಪಾಟೀಲ್ ಹೇಳಿದರು. ಪಾರಂಪರಿಕ ಟಾಂಗಾ ಸವಾರಿ ಉದ್ಘಾಟನೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಇಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಪಾರಂಪರಿಕ ಉಡುಗೆಯಲ್ಲಿ ನೂತನ ದಂಪತಿಗಳಿಗಾಗಿ ಆಯೋಜಿಸಿದ್ದ ಪಾರಂಪರಿಕ ಟಾಂಗ ಸವಾರಿಯ ಕಾರ್ಯಕ್ರಮವನ್ನು ಬೆಳಗ್ಗೆ ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು, ಮಹಾಪೌರ ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಸುನೀಲ್ ಬೋಸ್ ದಂಪತಿಗಳಿಗೆ ಬಾಗಿನ ನೀಡುವ ಮೂಲಕ ಸಚಿವರು ಉದ್ಘಾಟಿಸಿದರು.
ಬಹಳ ಉತ್ಕೃಷ್ಟವಾಗಿ ದಸರಾ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ನಾನು ನನ್ನ ಧರ್ಮಪತ್ನಿ ಹೇಮಾ, ಮಕ್ಕಳು ಮೊಮ್ಮಕ್ಕಳು ಸೇರಿ ಇಂದಿನ ಪಾರಂಪರಿಕ ಟಾಂಗಾ ಸವಾರಿಯಲ್ಲಿ ಭಾಗವಹಿಸಿದ್ದೇವೆ. ನಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಿಸುವಂತಹ ಇಂತಹ ವೈಭವದಲ್ಲಿ ಕುಟುಂಬ ಸಮೇತ ಭಾಗವಹಿಸಿರುವುದು ಬಹಳ ಸಂತೋಷವಾಗಿದೆ ಎಂದು ಸಂತೋಷ ಹಂಚಿಕೊಂಡರು.
ರಾಜ್ಯದಲ್ಲಿ ಒಟ್ಟು ೨೫ ಸಾವಿರ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳಿವೆ. ಇವುಗಳಲ್ಲಿ ೫೦೦ ರಿಂದ ೬೦೦ ಪಾರಂಪರಿಕ ಕಟ್ಟಡಗಳನ್ನು ಸರ್ಕಾರ ಗುರುತಿಸಿದೆ. ಇನ್ನೂ ೫೦೦ ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ ಉಳಿಸಿ ಸಂರಕ್ಷಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಎಲ್ಲ ಪಾರಂಪರಿಕ ಕಟ್ಟಡಗಳಾಗಲಿ, ಸ್ಮಾರಕಗಳನ್ನಾಗಲಿ ಸರ್ಕಾರ ಒಂದೇ ನಿರ್ವಹಣೆ ಮಾಡಲು ಆಗಲ್ಲ. ಅದಕ್ಕೆ ಜನಸಾಮಾನ್ಯರ ಅಭಿಮಾನ ಹಾಗೂ ಸಹಕಾರ ಬೇಕಾಗುತ್ತದೆ ಎಂದು ಹೇಳಿದರು.
ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು ನಿಮ್ಮ ಊರಿನಲ್ಲಿಯೇ ಇದ್ದರೆ ಅಂತಹ ಸ್ಮಾರಕವನ್ನೂ ರಕ್ಷಿಸುವ ಹಕ್ಕು ನಿಮಗಿರುತ್ತದೆ. ಹಾಗೂ ದತ್ತು ತೆಗೆದುಕೊಂಡು ರಕ್ಷಿಸಬಹುದಾಗಿದೆ. ಇಂತಹ ಕಟ್ಟಡಗಳನ್ನು ರಕ್ಷಿಸಲು ಜನರನ್ನು ಉತ್ತೇಜಿಸಲು ರಾಜ್ಯ ಸರ್ಕಾರ ನಮ್ಮ ಸ್ಮಾರಕಗಳ ದತ್ತು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದು ಯಶಸ್ವಿಯಾಗಿ ಸಾಗುತ್ತಿದೆ ಎಂದರು.