ಚಾಮರಾಜನಗರ: ನಗರದ ಜೈಹಿಂದ್ ಕಟ್ಟೆಯಲ್ಲಿ ಜೈಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಮೈಸೂರು ಗಾಂಧಿ ತಗಡೂರು ರಾಮಚಂದ್ರ ರಾವ್ ರವರ ಜನ್ಮ ದಿನವನ್ನು ಆಚರಿಸಲಾಯಿತು.
ನಿವೃತ್ತ ಶಿಕ್ಷಕರಾದ ಚಂದ್ರಕಲಾ ರವರು ಪುಷ್ಪ ಹಾಗೂ ನೂಲಿನ ಹಾರ ಅರ್ಪಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಗಡೂರು ರಾಮಚಂದ್ರ ರಾಯರು ಮೈಸೂರು ಭಾಗದ ಮಹಾನ್ ಶಿಕ್ಷಣ ಪ್ರೇಮಿ ಹಾಗೂ ಸಾಮಾಜಿಕ ವ್ಯಕ್ತಿಯಾಗಿದ್ದವರು. ಅವರ ಪ್ರಭಾವದಿಂದ ನೂರಾರು ಜನ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ಭಾರತದ ಸೇವೆ ಸಲ್ಲಿಸಿದರು ಎಂದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ತಗಡೂರು ರಾಮಚಂದ್ರ ರಾಯರು ತಮ್ಮ ಬಾಲ್ಯದಲ್ಲೇ ಮಹಾತ್ಮ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸೈಮನ್ ಆಯೋಗದ ವಿರುದ್ಧ ಹೋರಾಟ ನಡೆಸಿ ಮೈಸೂರು ಭಾಗದ ಮೊದಲ ರಾಜಕೀಯ ಕೈದಿಯಾದವರು. ತಗಡೂರು ರಾಮಚಂದ್ರ ರಾಯರು ಮಹಾತ್ಮ ಗಾಂಧೀಜಿಯವರನ್ನು ಮೈಸೂರು ತಗಡೂರು ಬದನವಾಳು ಗ್ರಾಮಗಳಿಗೆ ಕರೆ ತಂದವರು. ಇಡೀ ಜೀವನವನ್ನು ಭಾರತದ ಸ್ವಾತಂತ್ರ್ಯ ಚಳುವಳಿ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ಜನರಿಗೆ ಶಿಕ್ಷಣ ನೀಡಿದ ಸರಳ ಜೀವಿ ಎಂದರು. ಜೈಹಿಂದ್ ಪ್ರತಿಷ್ಠಾನ ದ ಕುಸುಮ, ಶ್ರಾವ್ಯ ಇದ್ದರು.