ಮೈಸೂರು: ಮೈಸೂರು ಧಾರ್ಮಿಕ ಪ್ರತಿಷ್ಠಾನ, ಗಣೇಶ ಉತ್ಸವ ಸಮಿತಿ ಸೆ.೧೬ ರಿಂದ ೨೪ರವರೆಗೆ ಭವ್ಯವಾದ ಮೈಸೂರು ಗಣೇಶ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸದಸ್ಯ ಎನ್.ಆರ್.ಮಂಜುನಾಥ್ ತಿಳಿಸಿದರು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಮಾಧವ ಕೃಪಾದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉತ್ಸವದಲ್ಲಿ ವಿವಿಧ ಗಣ್ಯರಾದಿಯಾಗಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಗಣೇಶನ ವಿಗ್ರಹವನ್ನು ಭಾರತದ ೨೧ ಪವಿತ್ರ ಕ್ಷೇತ್ರಗಳ ಮಣ್ಣು ಮತ್ತು ಗಂಗಾ, ಯಮುನಾ, ಗೋದಾವರಿ, ತುಂಗಾ, ಕಾವೇರಿ ಮುಂತಾದ ೭ ಪವಿತ್ರ ನದಿಗಳ ತೀರ್ಥ ಬಳಸಿ ಶುದ್ಧ ಪರಿಸರ ಸ್ನೇಹಿ ವಿಧಾನದಲ್ಲಿ ತಯಾರಿಸಲಾಗುತ್ತದೆ. ಸೆ.೧೬ರಂದು ಸ್ಥಳೀಯ ಕಲಾವಿದರ ಮಾರ್ಗದರ್ಶನದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದೊಂದಿಗೆ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗಾಗಿ ಸಾಮೂಹಿಕ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ಕಾರ್ಯಾಗಾರ ನಡೆಯಲಿದೆ. ನಗರದ ವಿವಿಧ ಶಾಲೆಗಳಲ್ಲಿ ಈ ವರ್ಷ ೫ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪರಿಸರ ಸ್ನೇಹಿ ಗಣೇಶ ವಿಗ್ರಹವನ್ನು ತಯಾರಿಸುವ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಮಕ್ಕಳು ನಾವು ತಯಾರಿಸಿದ ಬೀಜದುಂಡೆಯ ಗಣೇಶನನ್ನು ತಮ್ಮ ಮನೆಗಳಿಗೆ ಕೊಂಡೊಯ್ದು, ಪೂಜಿಸಿ ನಂತರ ಕುಂಡದಲ್ಲಿ ವಿಸರ್ಜಿಸುತ್ತಾರೆ. ಆ ಗಣೇಶ ವಿಗ್ರಹದ ಒಳಗಿರುವ ಬೀಜದ ಚೆಂಡುಗಳು ಮೊಳೆತು ಬೆಳೆಯುವುದನ್ನು ನೋಡುವ ಮಕ್ಕಳು ಮುಂದೆ ಪರಿಸರ ಪ್ರೇಮಿಗಳಾಗಿ ರೂಪುಗೊಳ್ಳುವುದನ್ನು ಕಾಣುವ ತವಕ ನಮ್ಮದಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಮೈಸೂರು ಗಣೇಶ ಉತ್ಸವದಲ್ಲಿ ಅಂತಾರಾಷ್ಟ್ರೀಯ ರಾಷ್ಟ್ರೀಯ ಮಟ್ಟದ ಹಾಗೂ ಹಲವಾರು ಸ್ಥಳೀಯ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಕೊಳಲು, ಸ್ಯಾಕ್ಸೋಫೋನ್, ಸುಗಮ ಸಂಗೀತ, ನೃತ್ಯ ಸೇರಿದಂತೆ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಹೇಳಿದರು.
ಮನೋಲ್ಲಾಸ ಹಾಗೂ ಜ್ಞಾನಾರ್ಜನೆಯ ಉದ್ದೇಶವಾಗಿ ಮಕ್ಕಳು ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದ ನಾಗರಿಕರಿಗೆ ವಿವಿಧ ಸ್ಪರ್ಧೆಗಳು ಕಾರ್ಯಕ್ರಮದುದ್ದಕ್ಕೂ ನಡೆಯಲಿವೆ. ನಗರದ ಎಲ್ಲ ಸಮುದಾಯದ ಮುಖಂಡರು, ಗಣ್ಯರು, ಜನನಾಮಾನ್ಯರು ಆಗಮಿಸಿ ಪ್ರತಿದಿನ ವಿನಾಯಕನಿಗೆ ಪೂಜೆ ನೆರವೇರಿಸಲಿದ್ದಾರೆ. ೨೧ ದಂಪತಿಗಳಿಂದ ಸಾಮೂಹಿಕ ಪೂಜೆ, ಅಥರ್ವ ಶೀರ್ಷ, ಹೋಮ, ಶತ ಮೋದಕ ಹೋಮ, ಶತ ನಾರಿಕೇಳ ಹೋಮ ಸೇರಿದಂತೆ ವಿನಾಯಕನಿಗೆ ಪ್ರತಿನಿತ್ಯ ವಿವಿಧ ವಿಶೇಷ ಪೂಜೆಗಳು ನೆರವೇರಲಿವೆ ಎಂದು ಅವರು ವಿವರಿಸಿದರು. ಮೈಸೂರು ಧಾರ್ಮಿಕ ಪ್ರತಿಷ್ಠಾನದ ಅಧ್ಯಕ್ಷ ಚರಣ್ ಇದ್ದರು.