ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಹತ್ತನೇ ವಕೀಲರ ಸಮ್ಮೇಳನವು ವಕೀಲರ ಬಹುದಿನಗಳ ಹಕ್ಕೊತ್ತಾಯಗಳಿಗೆ ಭರವಸೆಯ ಕಿರಣ ಮೂಡಿಸಿದ್ದು, ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ವಕೀಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನೀಡಿದ ಭರವಸೆಯಿಂದ ಹೊಸ ಆಶಾ ಭಾವನೆ ಮೂಡಿಸಿದೆ.
ಹಲವು ವರ್ಷಗಳ ನಂತರ ಸಮ್ಮಿಲನಗೊಂಡ ವಕೀಲ ಸಮೂಹದ ಒಗ್ಗಟ್ಟು ಇಂದಿನ ಸಮಾವೇಶದಲ್ಲಿ ಗಮನ ಸೆಳೆಯಿತು. ಮೈಸೂರು ನಗರದ ಹಲವು ಯಶಸ್ವಿ ಸಮಾವೇಶಗಳ ಸಾಲಿಗೆ ಇಂದಿನ ವಕೀಲರ ಸಮಾವೇಶ ಸೇರ್ಪಡೆಗೊಂಡು ದೂರದ ಊರುಗಳಿಂದ ಬಂದ ವೃತ್ತಿಪರ ವಕೀಲರಿಗೆ ನವ ಚೈತನ್ಯ ಮೂಡಿಸಿತು.
ತಮ್ಮ ತವರುನೆಲದಲ್ಲಿ ನಡೆಯುತ್ತಿರುವ ವಕೀಲರ ಸಮ್ಮೇಳನದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸ್ವತಃ ತಾವು ವಕೀಲರಾಗಿ ನಡೆಸಿದ ವೃತ್ತಿಯ ಅನುಭವವನ್ನು ಹಾಜರಿದ್ದ ವಕೀಲರೊಂದಿಗೆ ಹಂಚಿಕೊಂಡು ಸಮಾಜದ ಬೆಳವಣಿಗೆಗೆ ವಕೀಲರ ಕೊಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
1881ರಲ್ಲಿ ಪ್ರಾರಂಭಗೊಂಡ ಕರುನಾಡಿನ ನ್ಯಾಯಾಂಗ ವ್ಯವಸ್ಥೆ 1930ರಲ್ಲಿ ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ “ ಮೈಸೂರು ಉಚ್ಚ ನ್ಯಾಯಾಲಯ”ವೆಂದು ನಾಮಾಂಕಿತಗೊಂಡು ಸ್ವಾತಂತ್ರ್ಯಾ ನಂತರ ಕರ್ನಾಟಕ ಉಚ್ಚ ನ್ಯಾಯಾಲಯವಾಗಿ ಮರುನಾಮಕರಣಗೊಂಡು ಇಂದು ಬೆಂಗಳೂರು, ಧಾರವಾಡ ಮತ್ತು ಗುಲ್ಬರ್ಗಾ ವಿಭಾಗೀಯ ಪೀಠಗಳಾಗಿ 62 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಭಾರತದ ಸಂವಿಧಾನದ ರಚನೆಯಲ್ಲಿ ಸೈನಿಕರಂತೆ ಕರ್ತವ್ಯ ನಿರ್ವಹಿಸಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ ಕಲ್ಪಿಸಲು ಕಾರಣೀಭೂತರಾದವರು ಅಂದಿನ ವಕೀಲ ಸಮೂಹ ಎಂಬುದರಲ್ಲಿ ಸಂಶಯವಿಲ್ಲ. ಸ್ವತಂತ್ರ ಚಳುವಳಿಯಲ್ಲಿ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧೀಜಿ, ಪಂಡಿತ್ ಜವಹರಲಾಲ್ ನೆಹರು, ಲಾಲಾ ರಜಪತ್ ರಾಯ್, ಬಾಲ ಗಂಗಾಧರ ತಿಲಕ್, ಜಿ.ಕೆ. ಗೋಕಲೆ, ಡಾ. ಬಾಬು ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವು ಮಹನೀಯರು ವಕೀಲ ಸಮೂಹದ ಕೀರ್ತಿ ಕಳಶಗಳು. ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಡಾ. ಬಿ. ಆರ್. ಅಂಬೇಡ್ಕರ್, ಟಿ.ಟಿ. ಕೃಷ್ಣಮಾಚಾರಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಕೆ.ಎಂ. ಮುನ್ಷಿ, ಮಹಮದ್ ಸಾದಲ್, ಎನ್. ಮಾಧವರಾವ್ ಮುಂತಾದ ವಿದ್ವಾಂಸರು ಮೂಲತಃ ವಕೀಲರು. ಇಂತಹ ವಿಶಿಷ್ಟ ಪರಂಪರೆಯ ವಕೀಲ ವೃಂದ ದೇಶದ ನಿರ್ಮಾಣದಲ್ಲಿ ಮತ್ತು ಭಾರತದ ಮುನ್ನಡೆಗೆ ಅಗಾಧವಾದ ಸೇವೆ ಸಲ್ಲಿಸಿದೆ. ರಾಮಾಯಣ ಕಾಲದಿಂದಲೂ ನ್ಯಾಯಾಂಗ ವ್ಯವಸ್ಥೆಯ ಕುರುಹು ಹೊಂದಿರುವ ಭಾರತ ರಾಜ ಪ್ರಭುತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಕೀಲವೃಂದ ಹಲವು ಹೆಜ್ಜೆ ಗುರುತುಗಳನ್ನು ಮೂಡಿಸಿದೆ.
1950 ರಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದು ರಾಜಪ್ರಭುತ್ವ ಮತ್ತು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿ ಪ್ರಜಾಪ್ರಭುತ್ವ ಸರ್ಕಾರಗಳು ಅಸ್ತಿತ್ವಕ್ಕೆ ಬಂದ ನಂತರ ಶಾಸನ ಸಭೆ ಮತ್ತು ಸಂಸತ್‍ನಲ್ಲಿ ಶೇ.70ರಷ್ಟು ಸದಸ್ಯರು ಕಾನೂನು ಪದವೀಧರರಾಗಿದ್ದರು. ರಾಜ್ಯ ಮತ್ತು ಕೇಂದ್ರದ ಮಂತ್ರಿಮಂಡಲದ ಸರ್ವ ಸದಸ್ಯರು ಅಂದಿನ ಕಾಲಘಟ್ಟದಲ್ಲಿ ವಕೀಲರುಗಳೇ ಆಗಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ವಿಪರ್ಯಾಸ ಹಣದ ಪ್ರಾಮುಖ್ಯತೆ ಮತ್ತು ತೋಳ್ಬಲದ ರಾಜಕಾರಣದ ನಡುವೆ ಇಂದು ಹಣವಂತರ ಕೈ ಮೇಲಾಗಿ ಪ್ರತಿಭಾವಂತ ವಕೀಲರು ಶಾಸನ ಸಭೆ ಪ್ರವೇಶಿಸದಂತೆ ಆಗಿದೆ. ಇದರಿಂದ ಶಾಸನ ಸಭೆ ಮತ್ತು ಸಂಸತ್‍ನಲ್ಲಿ ರಚನಾತ್ಮಕ ಚರ್ಚೆಗಳ ಬದಲು ಕಾಟಾಚಾರದ ವಿಚಾರಗಳಿಗೆ ವೇದಿಕೆಯಾಗಿ ಸರಿಯಾದ ಶಾಸನ ಅಥವಾ ಕಾನೂನು ಹೊರ ಬರುತ್ತಿಲ್ಲ.
ಭಾರತದ ಇತಿಹಾಸದಲ್ಲಿ ಹಲವು ಹೆಗ್ಗುರುತುಗಳಿಗೆ ಸಾಕ್ಷಿಯಾಗಿರುವ ವಕೀಲ ವೃಂದ ಇಂದು ಸಂಕಷ್ಟದ ಹಾದಿಯಲ್ಲಿದೆ. ವಕೀಲವೃತ್ತಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಶೇ.70 ರಷ್ಟು ವಕೀಲರು ಹಲವು ಕಾರಣಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಷ್ಟ್ರದ ಏಳಿಗೆಗೆ ಹಲವು ಶಾಸನಗಳನ್ನು ರೂಪಿಸಿ ಕಕ್ಷಿದಾರರ ಹಿತ ಕಾಪಾಡಿ ನ್ಯಾಯಾಂಗವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ವಕೀಲ ವೃಂದ ಇಂದು ತಮ್ಮ ರಕ್ಷಣೆಗಾಗಿ “ವಕೀಲರ ಸಂರಕ್ಷಣಾ ಕಾಯಿದೆ” ಜಾರಿಗೆ ಹಕ್ಕೊತ್ತಾಯ ಮಂಡಿಸುವ ಕಾಲಘಟ್ಟದಲ್ಲಿದೆ. ಸಂವಿಧಾನ ರಚಿಸಿದ ವಕೀಲರಿಗೆ ಇಂದು ಜೀವ ರಕ್ಷಣೆಯ ಭಯ ಕಾಡುತ್ತಿದೆ.
ಸದಾಕಾಲ ನ್ಯಾಯಾಲಯ ಮತ್ತು ಕಕ್ಷಿದಾರರ ನಡುವಿನ ಜಂಜಾಟದಲ್ಲಿ ತನ್ನ ಕೌಟುಂಬಿಕ ಹಿತರಕ್ಷಣೆಗಾಗಿ ಸರ್ಕಾರದ ಸಹಾಯಹಸ್ತ ಬೇಡುವ ಸಂದರ್ಭ ವಕೀಲರಿಗೆ ಬಂದೊದಗಿದೆ. ಸರ್ವವ್ಯಾಪಿ ಅಭ್ಯಾಸನಿರತನಾಗುವ ವಕೀಲನಿಗೆ ನೆಮ್ಮದಿಯ ಬೆಳಕು ಬೇಕಾಗಿದೆ. ಬೇರೆ ವೃತ್ತಿಗಳಿಗಿಂತ ವಕೀಲ ವೃತ್ತಿಯು ವಿಭಿನ್ನವಾಗಿದ್ದು, ಎಲ್ಲ ವಿಚಾರಗಳ ಬಗ್ಗೆ ಅಭ್ಯಾಸ ನಡೆಸಿ ನೈಪುಣ್ಯತೆ ಹೊಂದುವ ವಕೀಲ ಆಡು ಮುಟ್ಟದ ಸೊಪ್ಪಿಲ್ಲ, ವಕೀಲರು ತಿಳಿಯದ ವಿಚಾರಗಳಿಲ್ಲ, ಆದ್ದರಿಂದಲೇ ವಕೀಲ ವೃತ್ತಿಗೆ ‘ಲರ್ನೆಡ್’ ವಕೀಲ ಎಂದು ಸಂಬೋಧಿಸುವುದು. ಇಂತಹ ವಕೀಲರಿಗೆ ನಿರ್ದಿಷ್ಟ ಆದಾಯದ ಮೂಲ ಇರುವುದಿಲ್ಲ. ಮೈಸೂರಿನ ಸಮ್ಮೇಳನ ವಕೀಲರ ಬದುಕಿಗೆ ದಾರಿದೀಪವಾಗಿ ಹೊಸ ಮನ್ವಂತರದೆಡೆಗೆ ಕೊಂಡೊಯ್ಯುವ ಸದಾಶಯವನ್ನು ಮೂಡಿಸಿದೆ.
ಐತಿಹಾಸಿಕ ಸಮ್ಮೇಳನದಲ್ಲಿ ಸಿದ್ದರಾಮಯ್ಯರವರು ವಕೀಲರ ಎಲ್ಲಾ ಬೇಡಿಕೆಗಳಿಗೆ ಸಕಾರಾತ್ಮಕ ವಾಗಿ ಸ್ಪಂದಿಸಿ ಆದ್ಯತೆ ಮೇಲೆ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದ್ದು, ಸಮಾವೇಶದ ಯಶಸ್ವಿಗೆ ಮುನ್ನುಡಿ ಬರೆಯಿತು.
ಟಿ.ಎಸ್.ಸತ್ಯಾನಂದ,
ವಕೀಲರು, ಮಂಡ್ಯ.