ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಹುಕೋಟಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತ ದಿನೇಶ್ ಕುಮಾರ್, ಕಾರ್ಯದರ್ಶಿ ಮತ್ತು ಎಇಇ ವರ್ಗಾವಣೆ ಮಾಡಿ ಕೂಡಲೇ ಜಾರಿಗೆ ಬರುವಂತೆ ಸೋಮವಾರ ಸಚಿವ ಭೈರತಿ ಸುರೇಶ್ ಮೌಖಿಕ ಆದೇಶ ಹೊರಡಿಸಿದ್ದಾರೆ.
ಹಂಚಿಕೆ ಆಗಿರುವ ಎಲ್ಲಾ ಸೈಟ್ಗಳನ್ನು ತಡೆಹಿಡಿಯಲಾಗಿದೆ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಸಂಬಂಧ ಐಎಎಸ್ ಅಧಿಕಾರಿಗಳಾದ ವೆಂಕಟಚಲಪತಿ, ಕವಳಗಿ ನೇತೃತ್ವದಲ್ಲಿ ತನಿಖೆ ನಡೆಸಿ 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿರುವ ಮುಡಾ ನಿವೇಶನಗಳನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದೆ. ಆ ಮೂಲಕ ಮುಡಾ ನಿವೇಶನಗಳ ಹಂಚಿಕೆ ಹಗರಣವನ್ನು ತನಿಖೆಗೆ ಆದೇಶಿಸಲಾಗಿದೆ. ಈ ಕುರಿತಾಗಿ ತನಿಖಾ ತಂಡವನ್ನು ರಚಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕೆ. ಲತಾ ಆದೇಶ ಹೊರಡಿಸಿದ್ದಾರೆ.
ಮೂಡಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಕಳೆದ ಮೂರು ದಿನಗಳಿಂದ ಮೈಸೂರು ಮೂಡಾದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಮಾಧ್ಯಮದ ಮೂಲಕ ತಿಳಿದು ಬಂದಿದೆ. ಹಗರಣ ಆರೋಪ ಕೇಳಿಬಂದ ಹಿನ್ನೆಲೆ ಇಂದು ಸಭೆ ನಡೆಸಿದ್ದೇನೆ. ಸಭೆಯಲ್ಲಿ ಹಲವಾರು ವಿಚಾರ ಚರ್ಚೆಯಾಗಿದೆ ಎಂದರು.
ತುಂಡು ಭೂಮಿಯನ್ನು ಹಂಚಿಕೆ ಮಾಡದಂತೆ ಆದೇಶ ಮಾಡಿದ್ದೇನೆ. 7 ತಿಂಗಳ ಹಿಂದೆ ನಾನೇ ಆದೇಶ ಮಾಡಿದ್ದೇನೆ. ಬಿಜೆಪಿ ಇದ್ದಾಗ ಮಾಡಿರುವ ಆದೇಶ ರದ್ದುಪಡಿಸಲು ಸೂಚಿಸಿದ್ದೇನೆ. ಇಬ್ಬರು ಅಧಿಕಾರಿಗಳ ಮೂಲಕ ಹಗರಣದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
1 ತಿಂಗಳು ಸೈಟ್ ಹಂಚಿಕೆ, ಮುಡಾ ಸಭೆ ಮಾಡುವಂತಿಲ್ಲ. ಹಂಚಿಕೆ ಆಗಿರುವ ಎಲ್ಲಾ ಸೈಟ್ಗಳನ್ನು ಕೂಡ ತಡೆಹಿಡಿಯಲಾಗಿದೆ. ವರ್ಗಾವಣೆಗೊಳಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಅಲ್ಲ, ನಿಷ್ಪಕ್ಷಪಾತ ತನಿಖೆ ಹಿನ್ನೆಲೆ ಅಧಿಕಾರಿಗಳ ವರ್ಗಾವಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರೈತರಿಗೆ ನಿವೇಶನ ನೀಡುವ ಸಂದರ್ಭದಲ್ಲಿ ಅವರಿಗೆ ವಂಚಿಸಿ ಅವರಿಗೆ ಸಿಗಬೇಕಿದ್ದ ನಿವೇಶನಗಳು ಬೇರೆಯವರ ಪಾಲಾಗಿದೆ ಎಂಬ ಆರೋಪಗಳೂ ಸಹ ಕೇಳಿಬಂದಿವೆ. ಈ ಬಗ್ಗೆಯೂ ತನಿಖೆ ನಡೆಸಿ ಒಂದು ವೇಳೆ ರೈತರಿಗೆ ನಿಜವಾಗಿ ವಂಚನೆ ಆಗಿದ್ದರೆ, ಅಂತಹ ನಿವೇಶನಗಳನ್ನು ವಾಪಸ್ ಪಡೆಯುತ್ತೇವೆ ಎಂದರು. ಮೂಡಾ ಅಧ್ಯಕ್ಷರಾಗಿದ್ದ ಹೆಚ್.ವಿ.ರಾಜೀವ್ ಆಗ ಬಿಜೆಪಿಯಲ್ಲಿದ್ದರು, ಈಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ತನಿಖೆ ಪ್ರಾಮಾಣಿಕವಾಗಿ ನಡೆಯುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವುದೇ ಪಕ್ಷ, ವ್ಯಕ್ತಿ ತಾರತಮ್ಯವಿಲ್ಲದೇ ಯಾರ ಅವಧಿಯಲ್ಲಿ ಹಗರಣ ನಡೆದಿದ್ದರೂ ಯಾವುದೇ ಮುಲಾಜಿಲ್ಲದೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಾಗುವುದು ಎಂದರು.