ಮೈಸೂರು: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನವಾದ ಬೆನ್ನ ಹಿಂದೆಯೇ ಮೈಸೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ದುಷ್ಕರ್ಮಿಗಳ ಸದೆ ಬಡಿಯಲು ನೈಟ್ ಬೀಟ್ ವ್ಯವಸ್ಥೆಯನ್ನ ಮತ್ತಷ್ಟು ಬಿಗಿ ಪಡಿಸುತ್ತಿದ್ದಾರೆ. ಈಗಾಗಲೇ ಜಾರಿಯಲ್ಲಿರುವ ಸ್ಮಾರ್ಟ್ ಈ ಬೀಟ್ ವ್ಯವಸ್ಥೆಯನ್ನ ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದ್ದಾರೆ.
ಉದಯಗಿರಿ ಠಾಣೆ ಪೊಲೀಸರು ಸಾರ್ವಜನಿಕರ ನೆರವನ್ನೂ ಕೋರಿದ್ದಾರೆ. ಅಪರಿಚಿತ ಹಾಗೂ ಶಂಕಿತ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.ಮಾಹಿತಿದಾರರ ವಿವರವನ್ನು ಗೌಪ್ಯತೆಯಿಂದ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆಯ ರಾತ್ರಿ ಗಸ್ತು ಕರ್ತವ್ಯದ ಸಿಬ್ಬಂದಿಗೆ ಶಕ್ತಿನಗರದ ಪಾರ್ಕ್ ಸಮೀಪ ಇನ್ಸ್ ಪೆಕ್ಟರ್ ಪಿ. ಕೆ. ರಾಜು ರವರು ಕರ್ತವ್ಯದ ಹಂಚಿಕೆಯನ್ನು ಮಾಡಿ ನಂತರ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.
ಶಕ್ತಿನಗರದ ನಾಗರಿಕರೊಂದಿಗೆ ಪೊಲೀಸ್ ಸಿಬ್ಬಂದಿಗಳು ಸಂಭಾಷಣೆ ನಡೆಸಿ, ಈ ಹಿಂದೆ ರಾತ್ರಿ ಗಸ್ತಿನ ಸಿಬ್ಬಂದಿಗಳು ಪಾಯಿಂಟ್ ಬುಕ್ ನಲ್ಲಿ ಸಹಿ ಮಾಡುವ ವ್ಯವಸ್ಥೆಯ ಬದಲಾಗಿ ಪೊಲೀಸ್ ಇಲಾಖೆಯ ವತಿಯಿಂದ ಜಾರಿಗೆ ತಂದಿರುವ ಸ್ಮಾರ್ಟ್ ಈ ಬೀಟ್ ವ್ಯವಸ್ಥೆಯ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುವ ಪೊಲೀಸರ ಕೆಲಸಕ್ಕೆ ಪ್ರಶಂಸೆಗಳ ಸುರಿಮಳೆಯಾಗಿದೆ.ಈ ವೇಳೆ ಸಬ್ ಇನ್ಸ್ ಪೆಕ್ಟರ್ ಸುನಿಲ್ ಹಾಗೂ ಸಿಬ್ಬಂದಿಗಳು ಹಾಜರಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಿದ್ದಾರೆ.