ಮೈಸೂರು: ಯಾವುದೇ ರೀತಿಯ ಪೂರ್ವಾನುಮತಿ ಇಲ್ಲದೆ ಹಾಗೂ ಸ್ಥಳೀಯ ವಿರೋಧದ ನಡುವೆಯೂ ಅನಧಿಕೃತವಾಗಿ ಮೊಬೈಲ್ ಟವರ್ ಅಳವಡಿಸುತ್ತಿರುವ ಕ್ರಮ ಖಂಡಿಸಿ ಸಹೃದಯನಗರ ಬಡಾವಣೆ ನಿವಾಸಿಗಳು ಪ್ರತಿಭಟಿಸಿದರು.
ನಗರದ ಹೊರವರ್ತುಲ ರಸ್ತೆಗೆ ಹೊಂದಿಕೊಂಡಿರುವ ಸಹೃದಯನಗರ ಬಡಾವಣೆಗೆ ಜೆಎಸ್ಎಸ್ ಬಡಾವಣೆ ಹಾಗೂ ಸುಖದಾಯಿ ಬಡಾವಣೆ ಕೂಡಿಕೊಂಡಿವೆ. ಕಳೆದ ಒಂದು ವಾರದ ಹಿಂದೆ ಬಡಾವಣೆಯ ನೀರಿನ ಟ್ಯಾಂಕ್ ಬಳಿ ಬೃಹತ್ ಗಾತ್ರದ ಪೈಪ್ ಗಳನ್ನು ತಂದು ಇರಿಸಲಾಗಿದ್ದು, ತರುವಾಯವೇ ತರಾತುರಿಯಲ್ಲಿ ಕೆಲಸ ಆರಂಭಿಸಿದ್ದಾರೆ. ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಬಡಾವಣೆಯ ಕೆಲವರು ಕೆಲಸಗಾರರನ್ನು ಪ್ರಶ್ನಿಸಿದ ವೇಳೆ ಉಡಾಫೆಯ ಉತ್ತರ ನೀಡಿದ್ದಾರೆ. ಬಳಿಕ ಬಡಾವಣೆಯ ಎಲ್ಲರೂ ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಈ ಜಾಗದಲ್ಲಿ ಮೊಬೈಲ್ ಟವರ್ ಸ್ಥಾಪಿಸುತ್ತಿರುವುದಾಗಿ ಕೆಲಸಗಾರರು ತಿಳಿಸಿದ್ದಾರೆ.
ಮೊಬೈಲ್ ಟವರ್ ನಿಂದ ಹೊರಬರುವ ತರಂಗಗಳಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಮೊಬೈಲ್ ಟವರ್ ಸ್ಥಾಪಿಸದಂತೆ ಪ್ರತಿಭಟಿಸಿದ್ದಾರೆ.
ಈ ವೇಳೆ ಮೊಬೈಲ್ ಕಂಪನಿಯ ನೌಕರರಿಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಬಳಿಕ ಮಾಹಿತಿ ಪಡೆದ ಪೊಲೀಸರು ಕೆಲಸವನ್ನು ಸ್ಥಗಿತಗೊಳಿಸಿ, ಪ್ರತಿಭಟನಾನಿರತ ಸ್ಥಳೀಯರನ್ನು ಸಮಾಧಾನಗೊಳಿಸಿದ್ದಾರೆ.

ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದಾದ ಯಾವುದೇ ಒಂದು ಯೋಜನೆ ಅನುಷ್ಠಾನ ಮಾಡುವ ಮುನ್ನ ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಬೇಕು. ಆದರೆ, ಈ ವಿಚಾರದಲ್ಲಿ ಸ್ಥಳಿಯರನ್ನು ಕಡೆಗಣಿಸಿ ವರುಣ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಪೊಲೀಸರು ಶಾಮೀಲಾಗಿ ಯೋಜನೆಯನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವ ಕೆಲಸಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಈ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ, ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.