ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಮೈಸೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಲಿದ್ದಾರೆ ಎಂಬ ಮುಂಜಾಗ್ರತೆಯಿಂದ ಶುಕ್ರವಾರ ಬೆಳಗ್ಗೆ ಹಲವು ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ಜಿಲ್ಲೆಯಲ್ಲಿರುವ ಬಣ್ಣಾರಿ ಶುಗರ್ಸ್ ಕಾರ್ಖಾನೆ ಕಬ್ಬಿಗೆ ಹೆಚ್ಚಿನ ದರ ನೀಡುತ್ತಿಲ್ಲ ಎಂದು ನ.೯ ರಂದು ಮೈಸೂರಿನಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಡದೆ ಬಂಧಿಸಿದ್ದರು.
ಇಂದು ಮೈಸೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಎರಡು ದಿನಗಳ ಪ್ರವಾಸ ಇರುವುದರಿಂದ ರೈತರು ಪ್ರತಿಭಟನೆ ಮಾಡಲಿದ್ದಾರೆ ಎಂಬ ಮುನ್ಸೂಚನೆಯಿಂದ ಪೊಲೀಸರು ಶುಕ್ರವಾರ ಬೆಳಗ್ಗೆ ಮೈಸೂರು ಜಿಲ್ಲೆಯ, ಜಯಪುರ, ಬನ್ನೂರು, ಟಿ.ನರಸೀಪುರದಲ್ಲಿರುವ ರೈತ ಮುಖಂಡರುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧನ ಮಾಡಿರುವ ರೈತರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ರಾಜ್ಯದ ಮೂಲೆ ಮೂಲೆಗಳಲ್ಲಿ ರೈತರು ರಸ್ತೆ ತಡೆ ನಡೆಸಲು ಸೂಚನೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.