Monday, December 1, 2025
Google search engine

Homeಸ್ಥಳೀಯಮೈಸೂರು ರೈಲ್ವೆ ಜಂಕ್ಷನ್ ವಿಶ್ವಮಟ್ಟದ ನಿಲ್ದಾಣವಾಗಿ ಮರು ಅಭಿವೃದ್ಧಿ: ಮುದಿತ್ ಮಿತ್ತಲ್

ಮೈಸೂರು ರೈಲ್ವೆ ಜಂಕ್ಷನ್ ವಿಶ್ವಮಟ್ಟದ ನಿಲ್ದಾಣವಾಗಿ ಮರು ಅಭಿವೃದ್ಧಿ: ಮುದಿತ್ ಮಿತ್ತಲ್

ಮೈಸೂರು: ಮೈಸೂರು ರೈಲ್ವೆ ಜಂಕ್ಷನ್‌ ಅನ್ನು ಪ್ರಸ್ತುತ ರೂ. 395.73 ಕೋಟಿಗಳ ಅಂದಾಜು ವೆಚ್ಚದಲ್ಲಿ ವಿಶ್ವಮಟ್ಟದ ನಿಲ್ದಾಣವಾಗಿ ಮರು ಅಭಿವೃದ್ಧಿ ಪಡಿಸಲಾಗುವುದು ಎಂದು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದರು.

ಮೈಸೂರು ವಿಭಾಗದಿಂದ ಸ್ಟೇಷನ್ ಮಹೋತ್ಸವದ ಅಂಗವಾಗಿ ಮೈಸೂರು ರೈಲು ನಿಲ್ದಾಣದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮವನ್ನು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಉದ್ಘಾಟಿಸಿದರು. ನಂತರ ಪರಂಪರೆ ಗ್ಯಾಲರಿ ಭೇಟಿ ನಂತರ ಮೈಸೂರು ರೈಲು ಸಂಗ್ರಹಾಲಯಕ್ಕೆ ಭೇಟಿ ನೀಡಿದರು.

ನಂತರ ಮಾತನಾಡಿದ ಅವರು, ಮೈಸೂರು ಮಹಾರಾಜರು, ರೈಲು ಸಂಪರ್ಕವನ್ನು ಆರ್ಥಿಕ ಅಭಿವೃದ್ಧಿಗೆ ಪ್ರಮುಖವೆಂದು ಪರಿಗಣಿಸಿ, ಮೈಸೂರು ಪ್ರಾಂತ್ಯದಲ್ಲಿ ರೈಲ್ವೆ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸಿದ್ದರು. ಮಹಾರಾಜರ ಆಡಳಿತದಲ್ಲಿದ್ದ ಮೈಸೂರು ಸ್ಟೇಟ್ ರೈಲ್ವೆ 14 ಏಪ್ರಿಲ್ 1951 ರಂದು ಭಾರತೀಯ ರೈಲ್ವೆ ರಾಷ್ಟ್ರೀಕರಣದ ನಂತರ, ಭಾರತ ಸರಕಾರದ ಅಧೀನದ ದಕ್ಷಿಣ ರೈಲ್ವೇಗೆ ವಿಲೀನಗೊಂಡಿತು. 2003ರಲ್ಲಿ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೇ ವಲಯ ಸ್ಥಾಪನೆಯೊಂದಿಗೆ, ಮೈಸೂರು ವಿಭಾಗವು ಈ ಹೊಸ ವಲಯದ ಅವಿಭಾಜ್ಯ ಅಂಗವಾಯಿತು.

ಮೈಸೂರು ರೈಲು ನಿಲ್ದಾಣವು NSG–2 ವರ್ಗಕ್ಕೆ ಸೇರಿದ ನಿಲ್ದಾಣವಾಗಿದ್ದು, ಒಟ್ಟು ಆರು ಪ್ಲಾಟ್ ಫಾರ್ಮ್ ಹೊಂದಿದೆ. ದ್ವಿ ಸಾಪ್ತಾಹಿಕ, ತ್ರೈ ಸಾಪ್ತಾಹಿಕ ಮತ್ತು ಸಾಪ್ತಾಹಿಕ ಸೇವೆಗಳನ್ನು ಒಳಗೊಂಡಂತೆ 106 ರೈಲುಗಳು ಸಂಚರಿಸುತ್ತವೆ. ಇವು ಮೈಸೂರು ನಗರಕ್ಕೆ ನವದೆಹಲಿ, ಹಾವ್ಡಾ, ಪಾಟ್ನಾ, ಮುಂಬೈ, ಕಚ್ಚೇಗುಡ, ಚೆನ್ನೈ, ತಿರುವನಂತಪುರಂ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳು ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ನಿಲ್ದಾಣದಲ್ಲಿ ದಿನಕ್ಕೆ ಸರಾಸರಿ 60,000 ಪ್ರಯಾಣಿಕರ ಸಂಚಾರವಿದ್ದು, ದಿನನಿತ್ಯ ಸುಮಾರು ರೂ. 21–25 ಲಕ್ಷಗಳಷ್ಟು ಆದಾಯವನ್ನು ಗಳಿಸುತ್ತದೆ. ಎಸ್ಕಲೆಟರ್‌ಗಳು, ಲಿಫ್ಟ್‌ ಗಳು, ಅಂಡರ್‌ ಪಾಸ್, ಪಾದಚಾರಿ ಮೇಲ್ಸೇತುವೆ, ವೈ-ಫೈ, ಕೋಚ್ ಸೂಚನಾ ಫಲಕಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ, ಆಹಾರ ಮಳಿಗೆಗಳು, ನಿರೀಕ್ಷಣಾ ಮಂದಿರಗಳು, ಬ್ಯಾಟರಿ ಚಾಲಿತ ವಾಹನಗಳು, ಎಟಿಎಂ ಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ನಿಲ್ದಾಣವು ದಿವ್ಯಾಂಗಜನ ಸ್ನೇಹಿಯಾಗಿದೆ ಎಂದು ಮೈಸೂರು ರೈಲ್ವೆ ಬಗ್ಗೆ ಮುದಿತ್ ಮಿತ್ತಲ್ ಮಾಹಿತಿ ನೀಡಿದರು.

ಮೈಸೂರು ಜಂಕ್ಷನ್‌ ಅನ್ನು ಪ್ರಸ್ತುತ ರೂ. 395.73 ಕೋಟಿಗಳ ಅಂದಾಜು ವೆಚ್ಚದಲ್ಲಿ ವಿಶ್ವಮಟ್ಟದ ನಿಲ್ದಾಣವಾಗಿ ಮರು ಅಭಿವೃದ್ಧಿಪಡಿಸಲಾಗುವುದು. ಈ ಅಭಿವೃದ್ಧಿಯು ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವಂತೆ ಹೊಸ ರೈಲುಗಳ ಚಾಲನೆ, ಹಾಲಿ ರೈಲುಗಳ ಸೇವೆಗಳ ಆವೃತ್ತಿ ಹೆಚ್ಚಿಸುವುದು ಹಾಗೂ ಹೊಸ ತಾಣಗಳಿಗೆ ಸಂಪರ್ಕ ಕಲ್ಪಿಸುವಂತೆ ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ಮೂರು ಹೊಸ ಪ್ಲಾಟ್ ಫಾರಂಗಳು, ನಾಲ್ಕು ಪಿಟ್ ಲೈನ್‌ಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಸ್ಟೇಬ್ಲಿಂಗ್ ಲೈನ್‌ ಗಳನ್ನು ನಿರ್ಮಿಸುವ ಕಾರ್ಯ ಮಂಜೂರಾಗಿದೆ ಎಂದು ತಿಳಿಸಿದರು.

ಲಲಿತಾ ಶಾಲೆಯ ವಿದ್ಯಾರ್ಥಿಗಳು ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು, ಮಹೋತ್ಸವಕ್ಕೆ ಸೊಬಗು ತಂದಿತು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ. ರೇವಣ್ಣ ಹಾಗೂ ನಿವೃತ್ತ ರೈಲ್ವೇ ನೌಕರ ಎಚ್.ಎಸ್. ರಾಮಣ್ಣ ಅವರಿಗೆ ಅವರ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮಕ್ಕೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್, ಜಡ್ ಆರ್ ಯುಸಿಸಿ ಮತ್ತು ಡಿಆರ್ ಯುಸಿಸಿ ಸದಸ್ಯರು, ಶಾಖಾ ಅಧಿಕಾರಿಗಳು, ಲಲಿತಾ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ರೈಲ್ವೇ ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular