ದಾವಣಗೆರೆ: ಮೈಸೂರು ಸ್ಯಾಂಡಲ್ ಸೋಪ್ಗೆ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿ ಆಯ್ಕೆಯಾಗಿರುವುದು ಸಮಂಜಸವಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ದಾವಣಗೆರೆಯಲ್ಲಿ ಬೇಸರ ವ್ಯಕ್ತಪಡಿಸಿದರು. “ನಮ್ಮ ರಾಜ್ಯದಲ್ಲಿಯೇ ಹಲವಾರು ಪ್ರತಿಭಾವಂತ ನಟಿಯರು ಇದ್ದರು. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು ಎಂಬುದು ನನ್ನ ಅಭಿಪ್ರಾಯವೂ ಹೌದು,” ಎಂದರು.
ತಮನ್ನಾರನ್ನು ಜಮೀರ್ ಆಯ್ಕೆ ಮಾಡಿದ್ದಾರೆ ಎಂಬ ಬಿವೈ ವಿಜಯೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ವಿಜಯೇಂದ್ರ ನಮ್ಮ ಜೊತೆ ಇದ್ದರೆ ಆಯ್ಕೆ ಮಾಡುತ್ತಿದ್ದೇನು!” ಎಂದು ಕಿಡಿಕಾರಿದರು.
ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತನಾಡಿದ ಅವರು, “ಈ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ. ಸಿಎಂ ಸಿದ್ದರಾಮಯ್ಯ ಐದು ವರ್ಷ ಪೂರ್ಣ ಅವಧಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ,” ಎಂದು ಭರವಸೆ ನೀಡಿದರು.
ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಭೇಟಿಯಾದ ಕುರಿತು ಮಾತನಾಡಿ, “ವಿಜಯೇಂದ್ರ ನಮ್ಮ ಪಕ್ಷದ ವಿಚಾರಗಳ ಬಗ್ಗೆ ಯಾಕೆ ಮಾತಾಡುತ್ತಾರೆ? ಮೊದಲು ತಮ್ಮ ಪಕ್ಷದೊಳಗಿನ ಯತ್ನಾಳ್ ಸಮಸ್ಯೆ ಬಗೆಹರಿಸಲಿ,” ಎಂದು ಟಾಂಗ್ ನೀಡಿದರು.
ಕೊನೆಯಲ್ಲಿ, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ಎಲ್ಲಾ ಏರ್ಪೋರ್ಟ್‌ಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಜನರು ಹೆದರಬೇಕಿಲ್ಲ, ಜಾಗೃತವಾಗಿರಬೇಕು,” ಎಂದು ತಿಳಿಸಿದರು.



