ಮೈಸೂರು: ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಗರದ ಪೂರ್ಣ ಚೇತನ ಶಾಲೆಯ ಮಕ್ಕಳೇ ಬರೆದು, ಸಂಪಾದಿಸಿ, ಪ್ರಕಟಿಸಿರುವ ಪಾಠ್ ಶಾಲಾ-ಜೀವನ್ ಯಾತ್ರಾ ಪುಸ್ತಕ ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರನ್ನು ಅಭಿನಂಧಿಸಿದ್ದಾರೆ.
ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ದರ್ಶನ್ ರಾಜ್ ಹಾಗು ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಅವರು ಇತ್ತೀಚಿಗೆ ಸಚಿವರನ್ನು ಅವರ ನವದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿ ಈ ಪುಸ್ತಕವನ್ನು ಅವರಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಸಚಿವರು ಮಕ್ಕಳ ಕ್ರಿಯಾಶೀಲತೆ, ಹಾಗು ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ನಾಲ್ಕರಿಂದ ಹತ್ತನೇ ತರಗತಿಯವರೆಗಿನ 104 ವಿದ್ಯಾರ್ಥಿಗಳು ತಮ್ಮ ಬದುಕಿನ ಸಣ್ಣ- ಸಣ್ಣ ಅನುಭವಗಳು, ಪ್ರವಾಸ, ಸೃಜನಶೀಲ ಆಲೋಚನೆಗಳು, ತಮ್ಮನ್ನು ಪ್ರಭಾವಿಸಿದ ಸಂಗತಿಗಳು-ವ್ಯಕ್ತಿಗಳ ಬಗ್ಗೆ ಬರೆದಿರುವ 189 ಲೇಖನಗಳ ಗುಚ್ಛ ಈ ಪುಸ್ತಕ . ಕೌಟುಂಬಿಕ ಬಾಂಧವ್ಯದ ಬೆಚ್ಚನೆಯ ಅನುಭವ, ಕೌತುಕಕಾರಿ ಜೀವ ವೈವಿಧ್ಯ, ಅಜ್ಜ ಕಟ್ಟಿಕೊಟ್ಟ ಅನುಭವದ ಬುತ್ತಿ, ಹೆತ್ತವರೇ ನಮ್ಮ ಮೊದಲ ಗುರುಗಳು, ಗೆಳೆತನವೆಂಬ ನಿಜ ಉಡುಗೊರೆ, ವಿಜ್ಞಾನ ಲೋಕ, ನನ್ನ ಅಪ್ಪ- ನನ್ನ ಹೀರೊ, ಮೌಲ್ಯಯುತ ಶಿಕ್ಷಣದ ಪ್ರಾಮುಖ್ಯತೆ, ಶಾಲೆಯಲ್ಲಿ ಕಲಿತ ಜೀವನ ಪಾಠಗಳು, ಪಠ್ಯಪುಸ್ತಕದಾಚೆಗಿನ ವಿಶಿಷ್ಟ ಲೋಕ, ನನ್ನ ಕನಸಿನ ಮನೆ, ಅಮ್ಮನ ನಿಸ್ವಾರ್ಥದ ಲೋಕ, ಆಟೋಟ ಕೂಟಗಳು ಕಲಿಸುವ ಪಾಠ, ಪ್ರಕೃತಿಯ ಪಾಠಗಳು, ಶಾಲೆ ರೂಪಿಸಿದ ನನ್ನ ವ್ಯಕ್ತಿತ್ವ, ಗುರುಗಳು ತೋರುವ ಆದರ್ಶದ ಹಾದಿ, ಹೀಗೆ, ಶಾಲೆಯ ವಿದ್ಯಾರ್ಥಿಗಳು, ತಮ್ಮ ಮುಗ್ದ ಭಾವನೆ-
ಅನುಭವಗಳಿಗೆ ಈ ಪುಸ್ತಕದಲ್ಲಿ ಅಕ್ಷರ ರೂಪ ನೀಡಿದ್ದಾರೆ.
ಈ ಪುಸ್ತಕದ ಇನ್ನೊಂದು ವಿಶಿಷ್ಟತೆ ಎಂದರೆ ಇದಕ್ಕೆ ಪ್ರತಿಷ್ಠಿತ ಐ ಎಸ್ ಬಿ ಎನ್ ಸಂಖ್ಯೆ ಕೂಡಾ ದೊರೆತಿದೆ. ಇದು ಈ ಪುಸ್ತಕದ ಗುಣಮಟ್ಟಕ್ಕೆ ಇನ್ನೊಂದು ಸಾಕ್ಷಿ. ಐ ಎಸ್ ಬಿ ಎನ್ ಸಂಖ್ಯೆ ದೊರೆತ ಮೊಟ್ಟಮೊದಲ ನಗರದ ಮಕ್ಕಳ ಪ್ರಕಟನೆ ಇದಾಗಿದೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ದರ್ಶನ್ ರಾಜ್ ಮಾತನಾಡಿ, ಕೇಂದ್ರ ವಿತ್ತ ಸಚಿವರ ಮೆಚ್ಚುಗೆ ನಮ್ಮ ಶಾಲೆಯ ಮಕ್ಕಳಿಗೆ ದೊರೆತ ಅತಿ ದೊಡ್ಡ ಬಹುಮಾನ. “ಇದರೊಂದಿಗೆ ಶಾಲೆಯ ಜವಾಬ್ದಾರಿ ಕೂಡ ಹೆಚ್ಚಿದೆ. ಮುಂದಿನ ದಿನಗಳಲ್ಲಿ, ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆಗೆ ಬೆಂಬಲ- ಅವಕಾಶ ಒದಗಿಸುವ ನಿಟ್ಟಿನಲ್ಲಿ ಶಾಲೆ ಕೆಲಸ ಮಾಡಲಿದೆ,” ಎಂದು ತಿಳಿಸಿದರು.
“ಭಾರತೀಯ ಶಿಕ್ಷಣ ಕ್ರಮದ ಬಲವರ್ಧನೆ ನಿಟ್ಟಿನಲ್ಲಿ ನಾವು ಈ ಶಾಲೆಯನ್ನು ಬೆಳೆಸುತ್ತಿದ್ದೇವೆ. ಇದೊಂದು ನಮ್ಮ ಕರ್ತವ್ಯ ಎನ್ನುವ ರೀತಿಯಲ್ಲಿ ನಾವು ಮುಂದೆ ಸಾಗುತ್ತಿದ್ದೇವೆ,” ಎಂದು ಅವರು ತಿಳಿಸಿದರು.
ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ಪೂರ್ಣ ಚೇತನ ಶಾಲೆಯ ಉದ್ದೇಶ ಮಕ್ಕಳ ಸರ್ವಾಂಗೀಣ ಪ್ರಗತಿ. ಅವರ ಬೌದ್ಧಿಕ ಬೆಳವಣಿಗೆಗೆ ಗಟ್ಟಿ ಅಡಿಪಾಯ ಹಾಕುವ ಕೆಲಸವನ್ನು ಶಾಲೆ ಮಾಡುತ್ತಿದೆ. ಈ ದೇಶ ಕಟ್ಟುವ ನಿಟ್ಟಿನಲ್ಲಿ ಇದು ನಮ್ಮ ಅಳಿಲು ಸೇವೆ ಎಂದು ತಿಳಿಸಿದರು.
ಶಾಲೆಯ ಹಿತೈಷಿಗಳಾದ ಶ್ರೀ ರಾಕೇಶ್ ಹಾಗು ಶ್ರೀಮತಿ ನೀಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.