ಮೈಸೂರು : ಚಾಮುಂಡಿ ಬೆಟ್ಟ, ಪಶ್ಚಿಮ ಘಟ್ಟ, ಬಂಡೀಪುರ, ನಾಗರಹೊಳೆ,ಕೃಷ್ಣರಾಜ ಸಾಗರ ಜಲಾಶಯ ಮತ್ತಿತರ ಸಮೃದ್ಧ ಅರಣ್ಯ ಮತ್ತು ಜಲಮೂಲ ಪ್ರದೇಶಗಳಿಂದ ಸುತ್ತುವರಿದಿರುವ ಮೈಸೂರು ನಗರದ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ ಎಂಬ ಆಘಾತಕಾರಿ ಅಂಶವನ್ನು ಗ್ರೀನ್‌ಪೀಸ್ ಸಂಶೋಧನಾ ವರದಿಯಲ್ಲಿ ಬಹಿರಂಗಗೊಂಡಿದೆ.
ಈ ವರದಿ ವಾಯು ಮಾಲಿನ್ಯದಿಂದ ನಗರದ ಜನತೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ. ಕರ್ನಾಟಕದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ನಾವು ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈ ಕೂಡಲೇ ವಾಯು ಮಾಲಿನ್ಯ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಆರೋಗ್ಯದ ಮೇಲೆ ಅದು ತೀವ್ರ ತೆರನಾದ ದುಷ್ಪರಿಣಾಮ ಬೀರಬಲ್ಲದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದಕ್ಷಿಣ ಭಾರತದ ೧೦ ಪ್ರಮುಖ ನಗರಗಳ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳಾದ ಪಿಎಂ ೨.೫ (ಸೂಕ್ಷ್ಮ) ಮತ್ತು ಪಿಎಂ ೧೦ (ಅತಿಸೂಕ್ಷ್ಮ)ಗಳ ಪ್ರಮಾಣವು ಡಬ್ಲ್ಯುಎಚ್‌ಒ ಮಾರ್ಗಸೂಚಿ ನಿಗದಿಪಡಿಸಿದ ಸರಾಸರಿ ಮಟ್ಟಗಳನ್ನು ಮೀರಿದ್ದು ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಗ್ರೀನ್‌ಪೀಸ್ ಇಂಡಿಯಾದ ಸ್ಪೇರ್ ದಿ ಏರ್-೨ ವರದಿ ಎಚ್ಚರಿಸಿದೆ.
ಈ ವರದಿ ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು, ಮೈಸೂರು, ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣ, ಕೊಚ್ಚಿ, ಅಮರಾವತಿ, ವಿಜಯವಾಡ, ಮತ್ತು ಪುದುಚೇರಿ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ವಿಶ್ಲೇಷಿಸುತ್ತದೆ. ಈ ಹತ್ತು ನಗರಗಳ ಪೈಕಿ ವಿಶಾಖಪಟ್ಟಣಂನಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ.
ಮೈಸೂರಿನ ಗಾಳಿಯಲ್ಲಿ ಪಿಎಂ ೨.೫ ಕಣಗಳ ಪ್ರಮಾಣ ಡಬ್ಲ್ಯುಎಚ್‌ಒ ಮಾರ್ಗಸೂಚಿ ನಿಗದಿಪಡಿಸಿದ ಮಾನದಂಡಕ್ಕಿಂತ ೧೦ ಪಟ್ಟು ಮತ್ತು ಪಿಎಂ ೧೦ ಕಣಗಳ ಪ್ರಮಾಣ ೯ ಪಟ್ಟು ಹೆಚ್ಚಿರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಇದು ಗಾಳಿಯ ಗುಣಮಟ್ಟ ಮಾಪಕ ನ್ಯಾಶನಲ್ ಎಂಬಿಯಂಟ್ ಏರ್ ಕ್ವಾಲಿಟಿ ಸ್ಟಾಂಡರ್ಡ್ ನಿಗದಿಪಡಿಸಿದ ಮಿತಿಗಳನ್ನೂ ಮೀರಿದೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ.