ಮೈಸೂರು: ಕರ್ತವ್ಯಕ್ಕೆ ಹಾಜರಾದ ಭದ್ರತಾ ಸಿಬ್ಬಂದಿ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಮೈಸೂರು ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಬಳಿ ನಡೆದಿದೆ. ಸಂಜಯ್ ಎಂಬುವರೇ ಸಾವನ್ನಪ್ಪಿದ ಭದ್ರತಾ ಸಿಬ್ಬಂದಿ. ಅನಾರೋಗ್ಯವಿದ್ದರೂ ಕೆಲಸಕ್ಕೆ ಹಾಜರಾದ ಸಂಜಯ್ ಕುಸಿದುಬಿದ್ದು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ.
ನವೆಂಬರ್ 1ರಿಂದ ಮೈಸೂರು ವಿಶ್ವವಿದ್ಯಾಲಯವು ಹೊಸ ಏಜೆನ್ಸಿಯನ್ನು ನೇಮಿಸಿಕೊಂಡಿದ್ದು,
ಈ ಹಿಂದಿನ ಗುತ್ತಿಗೆದಾರನಂತೆ ಭದ್ರತಾ ಕಾರ್ಮಿಕರ ಹಾಲಿ ಗುತ್ತಿಗೆ ಪಡೆದಿರುವ ಎಸ್ ಆರ್ ಆರ್ ಎಂಬ ಬೆಂಗಳೂರು ಮೂಲದ ಏಜೆನ್ಸಿಯು ಸಿಬ್ಬಂದಿಗೆ ವಾರದ ರಜೆ ನೀಡದೆ ಒತ್ತಡ ಹೇರುತ್ತಿದ್ದ ಆರೋಪ ಕೇಳಿ ಬಂದಿದೆ. ಏಜೆನ್ಸಿಯ ಎಸ್.ಒ ಅರುಣ್ ಕುಮಾರ್ನಿಂದ ನಿರಂತರ ಒತ್ತಡವಿತ್ತು ಎಂದು ಸಹೋದ್ಯೋಗಿಗಳು ಹೇಳಿದ್ದಾರೆ.
ವಾರದ ರಜೆಗಾಗಿ ಆಗ್ರಹಿಸಿ ಎಐಯುಟಿಯುಸಿ ಸಂಘಟನೆ ಸಹಯೋಗದೊಂದಿಗೆ ಭದ್ರತಾ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಆರು ದಿನ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ದಿನ ವಾರದ ರಜೆಯಾಗಿ ನೀಡಲು ಒತ್ತಾಯಿಸಿದ್ದಾರೆ. ಆದರೆ ಗುತ್ತಿಗೆದಾರರು ಭದ್ರತಾ ಕಾರ್ಮಿಕರಿಗೆ ರಜೆ ಗಳು ಇರುವುದಿಲ್ಲ ಎಲ್ಲಾ ಸಮಯದಲ್ಲಿಯೂ ಕೆಲಸ ಮಾಡಬೇಕಾಗುತ್ತದೆ ಎಂಬ ದುರಹಂಕಾರದ ಮಾತುಗಳನ್ನು ಆಡಿದ್ದಾರೆ. ಈ ವಿಷಯದ ಕುರಿತು ಮಂಗಳವಾರ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಮಿಕರನ್ನು ವಜಾಗೊಳಿಸುವುದಾಗಿ ಏಜೆನ್ಸಿ ಅಧಿಕೃತ ಪತ್ರ ನೀಡಿದೆ ಮತ್ತು ಕೆಲಸ ನಿರಾಕರಣೆ ಮಾಡುವಂತೆ ಆದೇಶಿಸಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಂಜಯ್ ವಾರದ ರಜೆ ಕೇಳಿದ್ದಾರೆ. ಇದಕ್ಕೆ ಒಪ್ಪದ ಮೇಲ್ವಿಚಾರಕರು ಕೆಲಸ ಬೇಕಾದರೆ ಕೆಲಸ ಮಾಡು ಇಲ್ಲದಿದ್ದರೆ ಮನೆಗೆ ಹೋಗು ನಾಳೆಯಿಂದ ಬರಬೇಡ ಎಂದು ಹೆದರಿಸಿದ್ದಾನೆ. ಅನಿವಾರ್ಯವಾಗಿ ಅದೇ ಸ್ಥಿತಿಯಲ್ಲಿ ಸಂಜಯ್ ತನ್ನ ಕೆಲಸದ ಸ್ಥಳಕ್ಕೆ ಹೋಗಿದ್ದಾರೆ. ಅನಾರೋಗ್ಯದಲ್ಲೂ ಕೆಲಸಕ್ಕೆ ಬಂದ ಸಂಜಯ್ ಪ್ರಾಚ್ಯವಿದ್ಯಾ ಸಂಶೋಧನಾಲಯ ಮೆಟ್ಟಿಲುಗಳ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ಈ ಸಾವಿಗೆ ಯಾರನ್ನು ಹೊಣೆ ಮಾಡಬೇಕು ಎಂಬುದು ಪ್ರಶ್ನೆಯಾಗಿದೆ.

ಪ್ರತಿಭಟನೆ
ಸಾವಿಗೆ ಅತಿಯಾದ ಒತ್ತಡ ಕಾರಣ ಎಂದು ನ್ಯಾಯಕ್ಕಾಗಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕ್ರಾಫರ್ಡ್ ಹಾಲ್ ಬಳಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಕೂಡಲೇ ಎಸ್ಆರ್ ಆರ್ ಏಜೆನ್ಸಿ ರದ್ದು ಮಾಡಬೇಕು, ಸಾವಿಗೀಡಾದ ಸಂಜಯ್ ಗೆ ಸೂಕ್ತ ಪರಿಹಾರ ಕೊಡಬೇಕು ಹಾಗೂ ಏಜೆನ್ಸಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮೈಸೂರು ವಿವಿ ಸಂಶೋಧನಾ ಸಂಘ ,ದಲಿತ ವಿದ್ಯಾರ್ಥಿ ಒಕ್ಕೂಟ, ಎಐಯುಟಿಯುಸಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡಿದವು.



