ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಕಡೆ ಹೆಚ್ಚು ಒಲವು ತೋರುತ್ತಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಗೆಲುವು ಗ್ಯಾರಂಟಿಯಾಗಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಗ್ಯಾರಂಟಿ ಸಮಿತ ಅಧ್ಯಕ್ಷ ಹಾಗೂ ಜಿ.ಪಂ. ಮಾಜಿ ಸದಸ್ಯ ಅರುಣ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಹಳೆಕಾಮನಕೊಪ್ಪಲು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಮತಯಾಚಿಸಿ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತನಾಡಿದ ಅವರು ಸಿದ್ದರಾಮಯ್ಯರವರ ನೇತೃತ್ವದ ೫ ಗ್ಯಾರಂಟಿ ಯೋಜನೆಗಳು ಬಡವರ ಬದುಕನ್ನೇ ಬದಲಾಯಿಸಿವೆ. ಜನರು ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಬಿ.ಜೆ.ಪಿ. ಪಕ್ಷ ಸುಳ್ಳು ಭರವಸೆಗಳನ್ನು ನೀಡುತ್ತಾ ಧರ್ಮ, ಜಾತಿ, ಹಿಂದು ಮುಸ್ಲಿಂ ಎಂದು ಜನರಲ್ಲಿ ಕೋಮುಭಾವನೆಗಳನ್ನು ಭಿತ್ತಿ ಜನರ ನೆಮ್ಮದಿಯನ್ನು ಹಾಳು ಮಾಡಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಮೋದಿ ಮುಖ ನೋಡಿ ಮತ ನೀಡಿ ಎನ್ನುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಯವರ ಆಟ ನಡೆಯುವುದಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರನ್ನು ಬೆಂಬಲಿಸುವುದರೊಂದಿಗೆ ೧ ಲಕ್ಷ ಮತಗಳ ಅಂತರದಿಂದ ಲಕ್ಷ್ಮಣ್ ಗೆಲುವು ಸಾಧಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ.ಎಸ್. ಕರೀಗೌಡ, ರಾಜೇಶ್, ನಾಗರಾಜ್, ಯಜಮಾನ್ ಮಹಾದೇವ್, ನಾಗಣ್ಣ, ರಮೇಶ್, ಜಯರಾಮ ಮತ್ತಿತರರು ಹಾಜರಿದ್ದರು.