ಚಾಮರಾಜನಗರ: ಬೆಂಗಳೂರು ನಿರ್ಮಾಣದಲ್ಲಿ ನಾಡಪ್ರಭು ಕೆಂಪೇಗೌಡರ ಸಾಧನೆ ಕೊಡುಗೆ ಅಪಾರವಾಗಿದ್ದು, ಸ್ಮರಣೀಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಿರ್ಮಾಣಕ್ಕೆ ಕಾರಣರಾದ ಕೆಂಪೇಗೌಡರ ಕೊಡುಗೆಯನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕಿದೆ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿಯೂ ನಿರ್ಮಿಸಿದ ಗೋಪುರ, ದ್ವಾರಗಳು ಇಂದಿಗೂ ಸಹ ಅವರ ಅಸಾಮಾನ್ಯ ಜ್ಞಾನದ ಬಗ್ಗೆ ತಿಳಿಸುತ್ತದೆ. ಸಾಕಷ್ಟು ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದರು. ಅಲ್ಲದೇ ವೃತ್ತಿಯ ಆಧಾರಿತವಾಗಿ ನಿರ್ಮಿಸಿದ ಪೇಟೆಗಳನ್ನು ಉದಾಹರಣೆ ಸಹಿತವಾಗಿ ಇಂದು ಸಹ ನೋಡಬಹುದಾಗಿದೆ ಎಂದರು.ಸುಭದ್ರ ನೆಲೆ, ವಿಶ್ವ ವಿಖ್ಯಾತ ನಗರವಾದ ಬೆಂಗಳೂರು ನಿರ್ಮಾಪಕರಾದ ಕೆಂಪೇಗೌಡರ ಜನ್ಮ ದಿನದ ಆಚರಣೆಯು ಎಲ್ಲರ ಹೆಮ್ಮೆಯಾಗಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಕೆಂಪೇಗೌಡರ ಜಯಂತಿಯ ಶುಭಾಶಯಗಳನ್ನು ಕೋರುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ಮಾತನಾಡಿ ಕೆಂಪೇಗೌಡರ ಜೀವನ ಚರಿತ್ರೆಯಿಂದ ಕಲಿಯುವುದು ತುಂಬಾ ಇದೆ. ಕೆಂಪೇಗೌಡರವರು ತಮ್ಮ ನಿಸ್ವಾರ್ಥ ಮನೋಭಾವದಿಂದ ಇಂದು ಜಗತ್ಪ್ರಸಿದ್ದಿಯನ್ನ ಪಡೆದಿದ್ದಾರೆ. ಅವರ ಅಸಾಮಾನ್ಯ ವ್ಯಕ್ತಿತ್ವ, ಜಾಣತನ, ಆಡಳಿತದಿಂದ ಇಂದಿನ ಬೃಹತ್ ಬೆಂಗಳೂರು ಕಾಣಲು ಸಾಧ್ಯವಾಯಿತು. ಯಾವ ವ್ಯಕ್ತಿ ತನಗೋಸ್ಕರ ಬದುಕದೇ ಪರರ ಒಳಿತಿಗಾಗಿ ಬದುಕುತ್ತಾರೆಯೋ ಅವರು ಯಾವಾಗಲೂ ಜೀವಂತವಾಗಿರುತ್ತಾರೆ. ಅಂತಹ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡರು ನಿಲ್ಲುತ್ತಾರೆ ಎಂದು ತಿಳಿಸಿದರು.
ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಟಿ. ಜಯಲಕ್ಷ್ಮೀ ಸೀತಾಪುರ ಅವರು ಮಾತನಾಡಿ ಕೆಂಪೇಗೌಡರ ಸಾಧನೆಗೆ ಅವರ ತಂದೆ ತಾಯಿ ನೀಡಿದ ನೀತಿ ಶಿಕ್ಷಣವೇ ಕಾರಣ ಎಂದು ಹೇಳಬಹುದು. ಅವರು ನೀಡಿದ ನೀತಿ ಪಾಠಗಳೇ ಕೆಂಪೇಗೌಡರು ಜಗತ್ತಿನಾದ್ಯಂತ ಹೆಸರು ಮಾಡಲು ಸಾಧ್ಯವಾಯಿತು. ಇಂದಿನ ಶಿಕ್ಷಣಕ್ಕೆ ಹೋಲಿಸಿದರೆ ಅಂದಿನ ಶಿಕ್ಷಣ ಮೌಲ್ಯವನ್ನು ಅರ್ಥಮಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಸಮುದಾಯದ ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಪುಟ್ಟಸ್ವಾಮಿಗೌಡ, ಪಣ್ಯದಹುಂಡಿ ರಾಜು, ಚಿನ್ನಮುತ್ತು, ಸಿ.ವಿ. ನಾಗೇಂದ್ರ, ಮಹೇಶ್‍ಗೌಡ ಇತರೆ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಮೆರವಣೆಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಬಳಿ ಚಾಲನೆ ನೀಡಿದರು. ಮೆರವಣಿಗೆÀಯು ವಿವಿಧ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದ ಬಳಿ ಮುಕ್ತಾಯಗೊಂಡಿತು.