ಕಕಜವೇದಿಕೆಯಿಂದ ಕೆಂಪೇಗೌಡ ಜಯಂತೋತ್ಸವ- ಕೆಂಪೇಗೌಡ ವೇಷಧಾರಿ ಮಕ್ಕಳಿಗೆ ಸನ್ಮಾನ
ಚನ್ನಪಟ್ಟಣ: ನಾಡಪ್ರಭು ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತವಾರದವರಲ್ಲ. ಎಲ್ಲಾ ಸಮುದಾಯಕ್ಕೂ ಇಂದು ಆಶ್ರಯ ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ಮೂಲ ಕಾರಣೀಕರ್ತರಾಗಿದ್ದಾರೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಅಭಿಪ್ರಾಯಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಕಾವೇರಿ ಸರ್ಕಲ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ೫೧೫ ನೇ ಜಯಂತೋತ್ಸವ ಅಂಗವಾಗಿ ಶ್ರೀ ಕೆಂಪೇಗೌಡರ ವೇಷಧಾರಿಗಳಾಗಿದ್ದ ೬೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ನಾಡಪ್ರಭು ಕೆಂಪೇಗೌಡರ ಕುರಿತಾದ ಪುಸ್ತಕ ವಿತರಣೆ ಹಾಗೂ ಹಸಿರಿದ್ದರೆ-ಉಸಿರು ಅಭಿಯಾನದಡಿ ಗಿಡ ವಿತರಣೆ ಹಾಗೂ ಕೇಂಪೇಗೌಡರ ವೇಷಧಾರಿಗಳಿಂದ ಕೆಂಪೇಗೌಡ್ರ ಕುರಿತ ವಿಚಾರಧಾರೆಯ ಸಮಾರಂಭದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಇಂದು ಸರ್ವ ಧರ್ಮ, ಸಮುದಾಯ, ಜಾತಿಯ ಜನತೆಗೆ ಜೀವನ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬೆಂಗಳೂರು ನಗರದ ನಿರ್ಮಾತೃವಾಗಿದ್ದಾರೆ. ಇವರ ದೂರದೃಷ್ಠಿಯ ಫಲವಾಗಿ ಇಂದು ಬೆಂಗಳೂರು ಮಹಾನಗರವಾಗಿ ಬೆಳೆದಿದ್ದರೂ ಸಹ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಜನರ ದುರಾಸೆಯಿಂದ ಕೆರೆಕಟ್ಟೆಗಳು ಒತ್ತುವರಿಯಾಗಿವೆ ಎಂದು ವಿಷಾಧಿಸಿದರು.
ನಿವೃತ್ತ ಪ್ರಾಂಶುಪಾಲರ ಹಾಗೂ ಚನ್ನಪಟ್ಟಣ ಸ್ಪೋಟ್ಸ್ ಕ್ಲಬ್ ಅಧ್ಯಕ್ಷರಾದ ನಿಂಗೇಗೌಡರು ಕೆಂಪೇಗೌಡರ ೨ ಮೈಲಿ ಉದ್ದ ನಿರ್ಮಾಣವಾದ ಬೆಂಗಳೂರು ಇಂದು ೮೦ ಕಿಮೀ ವಿಸ್ತರಣೆಯಾಗಿ ಬೆಳೆದಿದ್ದು ಎಲ್ಲಾ ಜಾತಿ ಧರ್ಮದವರಿಗೆ ಆಸರೆಯಾಗಿದೆ ಎಂದರೆ ಅದಕ್ಕೆ ಕೆಂಪೇಗೌಡರ ದೂರ ದೃಷ್ಠಿಯೇ ಕಾರಣವಾಗಿದೆ. ಅವರು ಅಂದು ಮುಂದಿನ ಭವಿಷ್ಯದ ದೃಷ್ಠಿಯಿಂದ ಬೆಂಗಳೂರು ನಿರ್ಮಾಣ ಮಾಡಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆಕಟ್ಟೆ, ಕೋಟೆ, ಹೆಬ್ಬಾಗಿಲುಗಳನ್ನು ನಿರ್ಮಾಣ ಮಾಡಿ, ರಕ್ಷಣೆಯ ಜೊತೆಗೆ ಅವರು ನಿರ್ಮಾಣ ಮಾಡಿದ ಪೇಟೆಗಳು ಯಾರೇ ಬಂದರೂ ಅವರು ಸ್ವಂತ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಅವರ ಜಯಂತೋತ್ಸವ ಆಚರಿಸಿ ಅವರನ್ನು ಅವರನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೀಶ್ ಮಾತನಾಡಿ, ನಾಡ ಪ್ರಭು ಕೆಂಪೇಗೌಡರು ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಹಲವಾರು ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ವ್ಯಾಪಾರಕ್ಕೆ ಅನುಕೂಲವಾಗುವ ಪೇಟೆಗಳನ್ನು ನಿರ್ಮಾಣ ಮಾಡಿದರು. ಇಂದು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಬರುವ ಪ್ರತಿಯೊಬ್ಬರಿಗೂ ತಮ್ಮ ಜೀವನ ರೂಪಿಸಿಕೊಳ್ಳಲು ಆಸರೆಯಾಗಿದೆ. ಕೇಂಪೇಗೌಡರ ಕಟ್ಟಿದ ಬೆಂಗಳೂರು ಇಂದು ಆಧುನಿಕ ತಂತ್ರಜ್ಞಾನದ ಕೇಂದ್ರ ಬಿಂದುವಾಗಿದ್ದು, ದೇಶದಲ್ಲೇ ಪ್ರಖ್ಯಾತಿ ಪಡೆದಿದೆ ಎಂದರೆ ಅದಕ್ಕೆ ಕೆಂಪೇಗೌಡರೇ ಕಾರಣ ಎಂದ ಬಣ್ಣಿಸಿದರು.
ಶಿಕ್ಷಕ ವಳಗೆರೆದೊಡ್ಡಿ ಕೃಷ್ಣ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರು ಮುಂದಿನ ಪೀಳಿಗೆ ಭವಿಷ್ಯದ ದೃಷ್ಠಿಯಿಂದ ನಿರ್ಮಾಣ ಮಾಡಿದ ಬೆಂಗಳೂರು ನಗರಕ್ಕಾಗಿ ತಮ್ಮ ಸೊಸೆಯನ್ನೇ ಬಲಿ ಕೊಡುವ ಪರಿಸ್ಥಿತಿ ಬಂದಾಗ ಅವರು ಬೆಂಗಳೂರು ನಗರ ನಿರ್ಮಾಣವನ್ನು ಕೈಬಿಡುವ ನಿರ್ಧಾರ ಮಾಡಿದ ವೇಳೆ ಅವರ ಜನಪರ ಕಾರ್ಯಕ್ಕೆ ಅಡ್ಡಿ ಆಗಬಾರದು ಎಂಬ ನಿಟ್ಟಿನಲ್ಲಿ ಕೆಂಪೇಗೌಡರ ಸೊಸೆ ತನ್ನ ಪ್ರಾಣವನ್ನೇ ಅರ್ಪಿಸಿದ್ದಾರೆ. ಅವರ ತ್ಯಾಗದ ಫಲವಾಗಿ ಇಂದು ಕೋಟ್ಯಾಂತರ ಜನರು ಬೆಂಗಳೂರು ನಗರದಲ್ಲಿ ನೆಮ್ಮದಿಯಿಂದ ಜೀವನ ಕಟ್ಟಿಕೊಂಡಿದ್ದಾರೆ ಎಂದರು.
ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ ಮಾತನಾಡಿ, ಕೆಂಪೇಗೌಡರ ಬಗ್ಗೆ ಅವರ ಹೋರಾಟ, ತ್ಯಾಗದ ಬಗ್ಗೆ ಇಂದಿನ ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕೆಂಪೇಗೌಡರ ವೇಷಭೂಷಣ ಹಾಕಿಸಿ ಅವರಲ್ಲಿ ನಾಡ ಪ್ರೇಮದ ತಿಳುವಳಿಕೆ ಮೂಡಿಸುತ್ತಿರುವ ಕಕಜವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಕಾರ್ಯ ಶ್ಲಾಘನೀಯವಾಗಿದೆ. ವಿದ್ಯಾರ್ಥಿ ದಿಸೆಯಲ್ಲೇ ಮಕ್ಕಳಿಗೆ ನಾಡ ಪ್ರೇಮ ಮತ್ತು ನಾಡಿನ ಮಹಾನ್ ನಾಯಕರ ಬಗ್ಗೆ ತಿಳಿಸಿಕೊಡುವುದು ಉತ್ತಮ ಕೆಲಸ ಎಂದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ಕೆಂಪೇಗೌಡರು ಎಂದರೆ ಅವರು ಒಕ್ಕಲಿಗ ಸಮುದಾಯಕ್ಕೆ ಸೀಮಿತ ಎಂಬಂತಾಗಿದೆ. ಈ ಮನೋಭಾವ ದೂರವಾಗಿ ಎಲ್ಲಾ ಸಮುದಾಯಗಳಿಗೆ ಆಶ್ರಯ ನೀಡಿರುವ ಕೇಂಪೇಗೌಡರಿಗೆ ಗೌರವ ನೀಡುವುದು ಪ್ರತಿಯೊಂದು ಸಮುದಾಯದ ಜವಾಬ್ದಾರಿಯಾಗಬೇಕು ಎಂದರು.
ನಗರಸಭಾ ಮಾಜಿ ಸದಸ್ಯ ಜೆಸಿಬಿ ಲೋಕೇಶ್ ಮಾತನಾಡಿ, ಕೆಂಪೇಗೌಡರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಮಕ್ಕಳಲ್ಲಿ ನಾಡಪ್ರೇಮವನ್ನು ಬಿತ್ತುವ ಜೊತೆಗೆ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಯುವ ಪೀಳಿಗೆಗೆ ನಮ್ಮ ನಾಡು, ನುಡಿ ಮತ್ತು ನಾಡ ಪ್ರೇಮದ ಬಗ್ಗೆ ತಿಳಿಸಿ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಪಿ.ರಮೇಶ್‌ಅವರು ಮಾತನಾಡಿ, ಎಲ್ಲಾ ಸಮುದಾಯಗಳಿಗೆ ಆಸರೆಯಾಗಿರುವ ಬೆಂಗಳೂರು ನಿರ್ಮಾಣ ಮಾಡಿರುವ ನಾಡಪ್ರಭು ಕೆಂಪೇಗೌಡರನ್ನು ವರ್ಷಕ್ಕೆ ಒಮ್ಮೆ ನೆನಪು ಮಾಡಿಕೊಳ್ಳುವ ಬದಲು ಪ್ರತಿನಿತ್ಯ ಅವರನ್ನು ನೆನಪು ಮಾಡಿಕೊಳ್ಳಬೇಕು, ಕೆಂಪೇಗೌಡರ ಶಾಶನಗಳನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಮಾಗಡಿಯಲ್ಲಿ ಕೆಂಪೇಗೌಡರ ಸಮಾದಿಯ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿದ್ದರೂ ಅದನ್ನು ಅಭಿವೃದ್ಧಿ ಮಾಡಲು ಮುಂದಾಗದಿರುವುದು ಬೇಸರ ತರಿಸಿದೆ. ಈ ನಿಟ್ಟಿನಲ್ಲಿ ಈ ಅಭಿವೃದ್ಧಿಗೆ ಶೀಘ್ರವೇ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕೆಂಪೇಗೌಡರ ವೇಷಧಾರಿಗಳಾಗಿದ್ದ ವಿದ್ಯಾರ್ಥಿಗಳು ಅವರ ತೊದಲು ನುಡಿಯಲ್ಲಿ ನಾಡಪ್ರಭು ಕೆಂಪೇಗೌಡರ ಬಗ್ಗೆ ಮಾತನಾಡಿದರು. ಜೊತೆಗೆ ನಾಡ ರಕ್ಷಣೆಯ ಬಗ್ಗೆ ಮಾತನಾಡಿ ಎಲ್ಲರ ಮನಸೆಳೆದರು.