Friday, April 11, 2025
Google search engine

Homeರಾಜ್ಯಚಾಮುಂಡಿ ಬೆಟ್ಟದಲ್ಲಿ 414ನೇ ದಸರಾ ಮಹೋತ್ಸವಕ್ಕೆ ನಾಡೋಜ ಹಂ.ಪ.ನಾಗರಾಜಯ್ಯ ಚಾಲನೆ

ಚಾಮುಂಡಿ ಬೆಟ್ಟದಲ್ಲಿ 414ನೇ ದಸರಾ ಮಹೋತ್ಸವಕ್ಕೆ ನಾಡೋಜ ಹಂ.ಪ.ನಾಗರಾಜಯ್ಯ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಉತ್ಸವಕ್ಕೆ ಮೈಸೂರು ಸಜ್ಜಾಗಿದ್ದು, ಎಲ್ಲೆಡೆ ನವರಾತ್ರಿಯ ಸಂಭ್ರಮ, ಸಡಗರ ಕಳೆಕಟ್ಟಿದೆ. ಚಾಮುಂಡಿಬೆಟ್ಟದಲ್ಲಿ ಗುರುವಾರ 414ನೇ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ.

ಇಂದು ಬೆಳಗ್ಗೆ 9.15 ರಿಂದ 9.40ರ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದರು. ದೇವಿ ದರ್ಶನ ಪಡೆದು ಬಳಿಕ ವೇದಿಕೆ ಕಾರ್ಯಕ್ರಮವನ್ನೂ ಉದ್ಘಾಟಿಸಿದರು.

ಈ ಮೂಲಕ 10 ದಿನ ನಡೆಯುವ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಸೇರಿದಂತೆ ಗಣ್ಯರು ಭಾಗಿಯಾಗಿದ್ದಾರೆ.

ಬೆಳ್ಳಿಯ ರಥದಲ್ಲಿ ನಾಡದೇವಿ ಪ್ರತಿಷ್ಠಾಪನೆ

ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಾಗಿದೆ. ಇದಕ್ಕಾಗಿ ದೇವಾಲಯದಲ್ಲಿದ್ದ ಬೆಳ್ಳಿ ರಥವನ್ನು ವೇದಿಕೆಯ ಮೇಲೆ ನಿಲ್ಲಿಸಲಾಗಿದೆ. ಬೆಟ್ಟದಲ್ಲಿ ದಸರೆಗೆ ಚಾಲನೆ ದೊರೆಯುತ್ತಿದ್ದಂತೆ ದಸರಾ ದೀಪಾಲಂಕಾರ, ಯುವ ದಸರಾ, ರೈತ ದಸರಾ, ಮಕ್ಕಳ ದಸರಾ, ದಸರಾ ವಸ್ತುಪ್ರದರ್ಶನ, ಆಹಾರ ಮೇಳ, ದಸರಾ ಕ್ರೀಡಾಕೂಟ, ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಫ‌ಲಪುಷ್ಪ ಪ್ರದರ್ಶನ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ವಿಜಯದಶಮಿಯಂದು 40ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೊಂದಿಗೆ ಗಜಪಡೆಯಿಂದ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ.

ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಗೆ 10 ದಿನವೂ ವಿಶೇಷ ಅಲಂಕಾರ ಮಾಡಲಾಗುತ್ತದೆ. ಅ. 3ರಂದು ಬ್ರಾಹ್ಮೀ , 4ರಂದು ಮಹೇಶ್ವರಿ, 5ರಂದು ಕೌಮಾರಿ, 6ರಂದು ವೈಷ್ಣವಿ, 7ರಂದು ವಾರಾಹಿ, 8ರಂದು ಇಂದ್ರಾಣಿ, 9ರಂದು ಸಿದ್ಧಿ ಧಾತ್ರಿ, 10ರಂದು ಸರಸ್ವತಿ, 11ರಂದು ಮಹಾಲಕ್ಷ್ಮೀ ಹಾಗೂ 12ರಂದು ಅಶ್ವಾರೋಹಣ ಅಲಂಕಾರ ಮಾಡಲಾಗುತ್ತದೆ.

ಇಂದಿನಿಂದ ಖಾಸಗಿ ದರ್ಬಾರ್‌

ಮೈಸೂರಿನಲ್ಲಿ ದಸರಾ ಮಹೋತ್ಸವ ಸಂಭ್ರಮ ಮನೆ ಮಾಡಿದರೆ, ಅರಮನೆಯಲ್ಲಿ ಶರನ್ನವರಾತ್ರಿ ಆಚರಣೆಯ ಸಡಗರ ಶುರುವಾಗಲಿದೆ. ರಾಜವಂಶಸ್ಥ ಯದುವೀರ ಒಡೆಯರ್‌ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಬೆಳಗ್ಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಅವರಿಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 10.30ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳು ಆಗಮಿಸಲಿವೆ. ಬೆಳಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನೆರವೇರಲಿದೆ. ಬೆ. 11.35 ರಿಂದ 12.05ರ ಒಳಗೆ ಯದುವೀರ ಅವರ ಸಿಂಹಾಸನಾರೋಹಣದ ಮೂಲಕ ಖಾಸಗಿ ದರ್ಬಾರ್‌ ಆರಂಭವಾಗಲಿದೆ.

RELATED ARTICLES
- Advertisment -
Google search engine

Most Popular