Saturday, April 19, 2025
Google search engine

Homeರಾಜಕೀಯನಾಗಮಂಗಲ ಗಲಭೆ ಆರ್​ಎಸ್ಎಸ್, ಬಿಜೆಪಿ, ಜೆಡಿಎಸ್ ಹುನ್ನಾರ: ಎಂ ಲಕ್ಷ್ಮಣ್ ಗಂಭೀರ ಆರೋಪ

ನಾಗಮಂಗಲ ಗಲಭೆ ಆರ್​ಎಸ್ಎಸ್, ಬಿಜೆಪಿ, ಜೆಡಿಎಸ್ ಹುನ್ನಾರ: ಎಂ ಲಕ್ಷ್ಮಣ್ ಗಂಭೀರ ಆರೋಪ

ಮೈಸೂರು: ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಭೆ ಪೂರ್ವನಿಯೋಜಿತ. ಗಲಭೆಗೆ ಆರ್​ಎಸ್ಎಸ್, ಬಿಜೆಪಿ, ಜೆಡಿಎಸ್​ನವರು ಹುನ್ನಾರ ಮಾಡಿದ್ದರು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್​ಎಸ್ಎಸ್, ಬಿಜೆಪಿ, ಜೆಡಿಎಸ್​ ಸಂಚನ್ನು ವಿಫಲಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ. ನಾಗಮಂಗಲ ಪಟ್ಟಣದಲ್ಲಿ ಗಲಭೆ ಮಾಡಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರು.

ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಎಂ‌.ಲಕ್ಷ್ಮಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯದಲ್ಲಿ ‌ಕೋಮು ಗಲಭೆ ಸೃಷ್ಟಿಗೆ ಈ ನಾಲ್ವರೇ ಕಾರಣ. ರಾಜ್ಯದಲ್ಲಿ ಶಾಂತಿ ಕಾಪಾಡಲು ಈ ನಾಲ್ವರ ಮೇಲೆ ಕ್ರಮ ಜರುಗಿಸಲೇಬೇಕು ಎಂದು ಆಗ್ರಹಿಸಿದರು.

ಈಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ಸಿಂಗ್ ಅವರು ಕೂಡ,‌ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿ ಮಾಡುವಂತೆ ಬಿಜೆಪಿಯ ಮುಖಂಡರಿಗೆ ಹೇಳಿ ಹೋಗಿದ್ದಾರೆ. ಅದನ್ನು ನಾಗಮಂಗಲದ ಮೂಲಕ ಈಡೇರಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ನಾಗಮಂಗಲದಲ್ಲಿ ಮಧ್ಯರಾತ್ರಿಯಲ್ಲಿ ಒಂದೂವರೆಗೂ ಮೆರವಣಿಗೆ ಮಾಡಲಾಗಿದೆ. ಪೊಲೀಸರ ಅನುಮತಿಯೂ ಇರಲಿಲ್ಲ. ಮೆರವಣಿಗೆಯಲ್ಲಿದ್ದವರು ಮಸೀದಿಯ ಎದುರಲ್ಲೇ ನಿಂತು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.‌ ಇದಕ್ಕೆ ಕುಮ್ಮಕ್ಕು ಕೊಟ್ಟವರಾರು, ಇದಕ್ಕೆ ಕಾರಣವಾದವರು ಯಾರು? ಎಂದು ಕೇಳಿದರು.

ಅಲ್ಲಿ ಎರಡೂ ಸಮುದಾಯದವರೂ ಕಲ್ಲು ತೂರಿದ್ದಾರೆ ಹಾಗೂ ಕತ್ತಿ ಹಿಡಿದಿದ್ದಾರೆ. ಮಸೀದಿಯ ಎದುರಿನಲ್ಲೇ‌ ನಿಂತು, ಅಲ್ಲೇ ಪಟಾಕಿ ಸಿಡಿಸಿ ಪ್ರಚೋದಿಸಬೇಕು ಎಂಬ ಪೂರ್ವ ಯೋಜಿತ ಕೃತ್ಯ ಇದಾಗಿತ್ತು ಎಂದು ದೂರಿದರು.

ಎಚ್.ಡಿ. ಕುಮಾರಸ್ವಾಮಿ ಗೆದ್ದಾಗಿನಿಂದ ಮಂಡ್ಯದ ಜನರ ನೆಮ್ಮದಿ ಹಾಳಾಗಿದೆ. ಆ ಜನರು ಮುಂದೆಯೂ, ನೆಮ್ಮದಿಯಿಂದ ಇರುವುದಕ್ಕೆ ಬಿಡುವುದಿಲ್ಲ ಎಂದು ದೂರಿದರು.

ನಾಗಮಂಗಲದಲ್ಲಿ ಲೋಪ ಆಗಿರುವ ಬಗ್ಗೆ ಅಲ್ಲಿನ ಇನ್‌ಸ್ಪೆಕ್ಟರ್ ಅಮಾನತು ಮಾಡಲಾಗಿದೆ. ತಪ್ಪಿತಸ್ಥರು ಯಾವುದೇ ವರ್ಗದವರಾಗಿದ್ದರೂ ಕ್ರಮ ಜರುಗಿಸುತ್ತೇವೆ. ಅದರಲ್ಲಿ ಯಾವುದೇ ಮುಲಾಜಿಲ್ಲ. ದೇಶದಲ್ಲಿರುವ ಎಲ್ಲರೂ ಭಾರತ ಮಾತೆಯ ಮಕ್ಕಳೆ. ಅವರನ್ನು ಧರ್ಮದ ಆಧಾರದ ಮೇಲೆ ವಿಂಗಡಿಸಿ ನೋಡುವ ಕೆಲಸವನ್ನು ‌ಬಿಜೆಪಿಯವರು ಮಾಡಬಾರದು. ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು.

ನಾಗಮಂಗಲಕ್ಕೆ ಮಂಗಳೂರು ಮೊದಲಾದ ಕಡೆಗಳಿಂದ ಬಂದಿರುವ ಆರ್‌ಎಸ್‌ಎಸ್‌ನವರು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.

ಕೋಮುವಾದಿ ಪಕ್ಷವಾದ ಬಿಜೆಪಿ ಜೊತೆ ಸೇರಿ ಗೆದ್ದು ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ ರಾಜ್ಯದಲ್ಲಿ ಕೋಮು ಕಿಚ್ಚು ಹೊತ್ತಿಸುವುದನ್ನು ಬಿಡಬೇಕು. ಅವರ ಪ್ರಯೋಗಗಳಿಗೆ ತಕ್ಕ ಉತ್ತರವನ್ನು ಕೊಡಲಾಗುವುದು ಎಂದರು. ಪಕ್ಷದ ಗ್ರಾಮಾಂತರ ‌ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್ ಇದ್ದರು.

RELATED ARTICLES
- Advertisment -
Google search engine

Most Popular