ಯಳಂದೂರು: ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ನಾಗರಾಜು ಅವಿರೋಧವಾಗಿ ಆಯ್ಕೆಯಾದರು. ಈ ಸಂಬಂಧ ಅಗರ ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ನಾಗಮ್ಮ ಪುಟ್ಟಮಾದಯ್ಯ ರವರು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ನಾಗರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರನ್ನು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸಿಡಿಒ ಸುಭಾಷಿಣಿ ಇವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇವರು, ಈ ಸಹಕಾರ ಸಂಘಕ್ಕೆ ದಶಕಗಳ ಇತಿಹಾಸವಿದೆ. ಹಲವು ಏಳುಬೀಳುಗಳ ನಡುವೆ ಈ ಸಂಘ ಮತ್ತೆ ಚೇತರಿಕೆಯ ಹಾದಿಯಲ್ಲಿದೆ. ಸಾವಿರಾರು ಸದಸ್ಯರು ಹೊಂದಿರುವ ಈ ಸಂಘದಲ್ಲಿ ೨೨೧ ಮಂದಿಗೆ ಸಾಲನ್ನು ವಿತರಣೆ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ೨ ಕೋಟಿ ಸಾಲವನ್ನು ಮರುಪಾವತಿ ಮಾಡಲಾಗಿದೆ. ಹೊಸದಾಗಿ ೫೦ ಲಕ್ಷ ರೂ. ಸಾಲ ಪಡೆದುಕೊಳ್ಳಲು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ಗೆ ಮನವಿ ಮಾಡಲಾಗಿದ್ದು ಇದನ್ನು ಕೂಡ ವಿತರಿಸಲು ಕ್ರಮ ವಹಿಸಲಾಗುವುದು. ತಮ್ಮ ಅಧಿಕಾರವಧಿಯಲ್ಲಿ ಈ ಸಹಕಾರ ಸಂಘವು ಲಾಭಗಳಿಸಲು ಬೇಕಾದ ಎಲ್ಲಾ ಕ್ರಮಗಳನ್ನು ವಹಿಸಲಾಗುವುದು. ಇಲ್ಲಿಗೆ ಬೇಕಾದ ಅಗತ್ಯ ನೆರವು ನೀಡಲು ಇಲ್ಲಿನ ಅಧ್ಯಕ್ಷರು, ನಿರ್ದೇಶಕರು ಸದಸ್ಯರ ಬೆಂಬಲ ವಿಶ್ವಾಸವನ್ನು ಗಳಿಸಿಕೊಂಡು ಇದರ ಶ್ರೇಯೋಭಿವೃದ್ಧಿಗೆ ಪ್ರಮಾಣಿಕವಾಗಿ ಯತ್ನಿಸಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎ.ಬಿ. ಜಯಶಂಕರ್, ನಿರ್ದೇಶಕರಾದ ಮಾಂಬಳ್ಳಿ ನಂಜುಂಡಸ್ವಾಮಿ, ಅಗರ ವೆಂಕಟೇಶ್, ಪುಟ್ಟಸುಬ್ಬಪ್ಪ, ವಿ. ಸೋಮಣ್ಣ, ನಾಗಮ್ಮ ಪುಟ್ಟಮಾದಯ್ಯ, ಚಂದ್ರಶೇಖರ್, ಮಹದೇವಯ್ಯ, ಕೃಷ್ಣಮೂರ್ತಿ, ಎಂ. ಮಹೇಶ್, ಶಿಲ್ಪ ಕಾರ್ಯದರ್ಶಿ ಶಶಿಧರ್, ಜಿಲ್ಲಾ ಮೇಲ್ವಿಚಾರಕ ಅನಿಲ್‌ಕುಮಾರ್, ಸಲಹೆಗಾರ ಲಿಂಗಯ್ಯ ಜಿಪಂ ಮಾಜಿ ಉಪಾಧ್ಯಕ್ಷ ಕಿನಕಹಳ್ಳಿ ಸಿದ್ದರಾಜು, ರಾಚಪ್ಪ ಸೇರಿದಂತೆ ಅನೇಕರು ಹಾಜರಿದ್ದು ನೂತನ ಉಪಾಧ್ಯಕ್ಷರಿಗೆ ಶುಭಾಶಯ ಕೋರಿದರು.
೨೧ವೈಎಲ್‌ಡಿ ಚಿತ್ರ೦೨ ಯಳಂದೂರು ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಮಂಗಳವಾರ ಆಯ್ಕೆಯಾದ ನಾಗರಾಜುರನ್ನು ಸಂಘದ ಅಧ್ಯಕ್ಷರು, ನಿರ್ದೇಶಕರು, ಮುಖಂಡರು ಅಭಿನಂದಿಸಿದರು.