Monday, August 11, 2025
Google search engine

Homeರಾಜ್ಯಸುದ್ದಿಜಾಲನಾಗೇಗೌಡರು ಹೊಸ ಪೀಳಿಗೆಗೆ ಜಾನಪದ ಪರಿಚಯಿಸುವ ಕೆಲಸ ಮಾಡಿದ್ದಾರೆ: ಪ್ರೊ. ಹಿ.ಚಿ. ಬೋರಲಿಂಗಯ್ಯ

ನಾಗೇಗೌಡರು ಹೊಸ ಪೀಳಿಗೆಗೆ ಜಾನಪದ ಪರಿಚಯಿಸುವ ಕೆಲಸ ಮಾಡಿದ್ದಾರೆ: ಪ್ರೊ. ಹಿ.ಚಿ. ಬೋರಲಿಂಗಯ್ಯ

ರಾಮನಗರ: ಜಾನಪದ ಲೋಕವನ್ನು ಕಟ್ಟಲು ನಾಗೇಗೌಡರು ಶ್ರಮಿಸಿದ್ದಾರೆ. ನೂರಾರು ಗಂಟೆಗಳು ಕೇಳುವಷ್ಟು ನೋಡುವಷ್ಟು ಆಡಿಯೋ, ವಿಡಿಯೋ ದಾಖಲೀಕರಣ ಮಾಡಿದ್ದಾರೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ತಿಳಿಸಿದರು.

ಅವರು ರಾಮನಗರ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ವತಿಯಿಂದ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನ ‘ಲೋಕಸಿರಿ-108′ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಗೇಗೌಡರು ಹೊಸ ಪೀಳಿಗೆಗೆ ಜಾನಪದವನ್ನು ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ. ಜಾನಪದ ಕಲೆಯನ್ನು ಉಳಿಸಿ, ಬೆಳೆಸಬೇಕು, ಈ ಕಲೆಯನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡಬೇಕು ಎಂದರು.

ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ವಿ.ಸೂರ್ಯಪ್ರಕಾಶ್ ಮಾತನಾಡಿ, ಜಾನಪದ ಲೋಕ ನಾಡಿಗೆ ಹೆಮ್ಮೆ, ಜಾನಪದ ಕಲೆಗಳ ತವರು. ಶಾಲಾ ಪಠ್ಯದಲ್ಲಿ ಇಂತಹ ಕಲಾವಿದರಿಂದ ಮಕ್ಕಳಿಗೆ ತರಬೇತಿ ಕೊಡಿಸಬೇಕು ಇದರಿಂದ ಕಲೆ ಉಳಿಯುತ್ತದೆ ಎಂದರು.

ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಯದರ್ಶಿ ಟಿ.ಶಿವರಾಜು ಮಾತನಾಡಿ, ಜಾನಪದ ಲೋಕದ ಆಕರ್ಷಕ ಕೇಂದ್ರ ಬಿಂದುಗಳೇ ಕಲಾವಿದರು. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂದರು.

ಗೌರವ ಸ್ವೀಕರಿಸಿ ಸಂವಾದದಲ್ಲಿ ಪಾಲ್ಗೊಂಡ ಕಲಾವಿದರಾದ ಶಿವಣ್ಣ ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡರು ಮತ್ತು ಕಲೆಯ ಆಸಕ್ತಿ ಕಲಿತ ಬಗೆಯನ್ನು ತಿಳಿಸಿದರು. ಮಂಟೇಸ್ವಾಮಿಯ ಕುರಿತ ಬಸವಣ್ಣನ ಸಾಲು, ಮಲೈಮಹದೇಶ್ವರ, ನಂಜುಂಡೇಶ್ವರ, ಬೆಳ್ಳಿಬೆಟ್ಟದ ವಡೆಯ ಬಿಳಿಗಿರಿರಂಗನಾಥ, ಬೇವಿನಹಟ್ಟಿ ಕಾಳಮ್ಮ, ನೀಲವೇಣಿ ಪವಾಡ, ಗಂಗೆ-ಗೌರಿ ಕಥೆಗಳನ್ನು ಹಾಡಿದರು. ತಂಡದ ಸದಸ್ಯರಾದ ಸುರೇಶ್ ಕೆ.ಎಂ, ಪ್ರತಾಪ್, ಪತ್ನಿ ಗೌರಮ್ಮ ತಾಳ ಮತ್ತು ದನಿ ಗೂಡಿಸಿದರು.

ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಲ್ಲಿ ಪ್ರತಿ ತಿಂಗಳು ನಡೆಯುವ ಲೋಕಸಿರಿ ತಿಂಗಳ ಅತಿಥಿ-108ರ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಹನುಮಂತೇಗೌಡನದೊಡ್ಡಿಯ ಮಾದೇಶ್ವರನ ಗುಡ್ಡರಾದ ತಂಬೂರಿ ಕಲಾವಿದ ಶಿವಣ್ಣ ಇವರನ್ನು ಗೌರವಿಸಲಾಯಿತು.

ಅನೇಕಲ್ ಬಳಿಯ ಬೆಂಗಳೂರು ಕಾಲೇಜ್ ಆಫ್ ಎಜುಕೇಷನ್‌ನ ಪ್ರಾಂಶುಪಾಲರಾದ ಡಾ.ಸುಬ್ರಮಣಿ ಸಿ.ಎಸ್ ಮಾತನಾಡಿದರು. ಪರಿಷತ್ತಿನ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾದ ಸು.ತಾ.ರಾಮೇಗೌಡ ಉಪಸ್ಥಿತರಿದ್ದರು.

ಕಾರ್ಯನಿರ್ವಹಣಾಧಿಕಾರಿ ಸರಸವಾಣಿ ಸ್ವಾಗತಿಸಿದರು, ಕ್ಯೂರೇಟರ್ ಡಾ. ರವಿ ಯು.ಎಂ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ರಂಗಸಹಾಯಕ ಪ್ರದೀಪ್ ನಿರೂಪಿಸಿದರು, ಬೆಂಗಳೂರು ಕಾಲೇಜ್ ಆಫ್ ಎಜುಕೇಷನ್ ಪ್ರಶಿಕ್ಷಣಾರ್ತಿಗಳು, ಡಿಪ್ಲಮೊ ವಿದ್ಯಾರ್ಥಿಗಳು ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular