ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಡೆದಿರುವ ಅಕ್ರಮದ ಪ್ರಮುಖ ರೂವಾರಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ನೈತಿಕತೆ, ಸ್ವಾಭಿಮಾನವಿದ್ದರೆ ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿ.ಶ್ರೀರಾಮಲು ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗೇಂದ್ರ ಅವರಿಗೆ ತಪ್ಪು ಮಾಡಿದ್ದೇನೆ ಎನ್ನುವ ಸ್ವಾಭಿಮಾನವಿದ್ದರೆ ಅವರು ಶಾಸಕ ಸ್ಥಾನದಲ್ಲಿ ಮುಂದುವರೆಯಬಾರದು. ಪರಿಶಿಷ್ಟ ಪಂಗಡಕ್ಕೆ ಸೇರಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದೇನೆ ಎಂಬ ಪಾಪಪ್ರಜ್ಞೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಸಮುದಾಯದ ಮಂತ್ರಿಯಾಗಿ ಮೀಸಲು ಕ್ಷೇತ್ರದಿಂದ ಗೆದ್ದು ಆ ಸಮುದಾಯದ ಬೆನ್ನಿಗೆ ಚೂರಿ ಹಾಕಿರುವ ನಾಗೇಂದ್ರ ಶಾಸಕ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಉಳಿಸಿಕೊಂಡಿಲ್ಲ. ಎಸ್‌ಐಟಿ ಇಲ್ಲವೇ ಇ.ಡಿ ಅಧಿಕಾರಿಗಳು ತಕ್ಷಣವೇ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿರುದ್ಧ ತನಿಖಾ ತಂಡದವರು ಪ್ರಬಲವಾದ ಎಫ್‌ಐಆರ್ ದಾಖಲಿಸಬೇಕು. ಜೊತೆಗೆ ಒಂದು ತಿಂಗಳೊಳಗೆ ನಿಗಮದ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕೆಂದು ಒತ್ತಾಯ ಮಾಡಿದರು.
ನಾವು ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವವರೆಗೂ ಬಿಡುವುದಿಲ್ಲ. ಶೀಘ್ರದಲ್ಲೇ ಪರಿಶಿಷ್ಟ ಪಂಗಡದ ನಿಯೋಗವು ದೆಹಲಿಗೆ ತೆರಳಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ದೂರು ನೀಡುತ್ತೇವೆ. ನಮ್ಮ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಯಾರೇ ದುರುಪಯೋಗಪಡಿಸಿಕೊಂಡಿದ್ದರೂ ಸುಮ್ಮನೆ ಬಿಡುವುದಿಲ್ಲ. ಒಂದೊಂದು ರೂಪಾಯಿ ಕೂಡ ವಾಪಸ್ ಹಿಂತಿರುಗಿಸುವವರೆಗೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಒಬ್ಬ ಹಿರಿಯರು. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ ಅವರು ಬೇಜವಾಬ್ದಾರಿಯಾಗಿ ಮಾತನಾಡಿರುವುದಕ್ಕೆ ನೋವಿದೆ ಎಂದು ಅಸಮಾಧಾನ ಹೊರಹಾಕಿದರು.
ನಾಗೇಂದ್ರ ಒಬ್ಬರ ರಾಜೀನಾಮೆ ಪಡೆದರೆ ಸಾಲುವುದಿಲ್ಲ. 187 ಕೋಟಿ ಹಣ ವಾಪಸ್ ತರಬೇಕು. ಅಧಿಕಾರಿಗಳ ತಲೆದಂಡ ಕೂಡ ಆಗಬೇಕು ಎಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದ್ದಾರೆ.