ನವದೆಹಲಿ, ಜುಲೈ 13: ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಭಾರೀ ಬೇಡಿಕೆ ಇದೆ. ಭಾರತದ ಮಹಾನಗರಗಳನ್ನು ಬೆಸೆಯುವ ರೈಲುಗಳು ಅತೀ ಹೆಚ್ಚು ಸದ್ದು ಮಾಡುತ್ತಿವೆ. ಆದರೆ, ಕೆಲ ಪ್ರಕರಣಗಳ ಮೂಲಕ ನೆಗೆಟಿವ್ ಸುದ್ದಿಗಳನ್ನು ವಂದೇ ಭಾರತ್ ರೈಲುಗಳು ಹೊತ್ತು ತರುತ್ತಿವೆ. ಮುಂಬೈನ ಸಿಎಸ್‌ಎಂಟಿಯಿಂದ ಗೋವಾದ ಮಡಗಾಂವ್‌ಗೆ ಹೋಗುತ್ತಿದ್ದ ವಂದೇ ಭಾರತ್ ರೈಲು ಕೆಟ್ಟ ಸುದ್ದಿಯೊಂದನ್ನು ನೀಡಿದೆ. ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ನೀಡಿದ ಆಹಾರದಲ್ಲಿ ಮನುಷ್ಯರ ಉಗುರುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಪ್ರಯಾಣಿಕರಿಗೆ ರೈಲಿನ ಸಿಬ್ಬಂದಿ ಆಹಾರವನ್ನು ನೀಡಿದ್ದರು. ಆ ಆಹಾರದಲ್ಲಿ ಮನುಷ್ಯರ ಉಗುರು ಪತ್ತೆಯಾಗಿರುವುದು ಆಕ್ರೋಶಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ಅಡುಗೆ ಗುತ್ತಿಗೆದಾರನಿಗೆ 25,000 ರೂಪಾಯಿ ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಉಗುರು ಪತ್ತೆ ಹಚ್ಚಿರುವ ಪ್ರಯಾಣಿಕರು ಆಹಾರದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆಯೂ ಮುಂಬೈ-ಗೋವಾ ರೈಲಿನಲ್ಲಿ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ಹಲವಾರು ದೂರುಗಳು ಬಂದಿದೆ. ಈಗ, ಇಂತಹ ಘಟನೆಗಳನ್ನು ತಡೆಯಲು ಐಆರ್‌ಸಿಟಿಸಿ ಕೆಲವು ಪ್ರೋಟೋಕಾಲ್‌ಗಳನ್ನು ಜಾರಿಗೆ ತಂದಿದೆ. ಕಾರ್ಯನಿರ್ವಾಹಕ ಮಟ್ಟದ ಅಧಿಕಾರಿಯೊಬ್ಬರು ಈಗ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸಲಿದ್ದು, ರೈಲುಗಳಲ್ಲಿ ಆನ್-ಬೋರ್ಡ್ ಸೇವೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.
ಐಆರ್‌ಸಿಟಿಸಿ ರತ್ನಗಿರಿಯ ರೈಲು ನಿಲ್ದಾಣದ ಮೂಲ ಅಡುಗೆಮನೆಯಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದೆ. ಅಲ್ಲಿಂದ ಈ ಮಾರ್ಗದಲ್ಲಿ ಪ್ರಯಾಣಿಸುವ ವಂದೇ ಭಾರತ್ ರೈಲಿಗೆ ಆಹಾರವನ್ನು ಲೋಡ್ ಮಾಡಲಾಗುತ್ತದೆ. ಜೂನ್ 27 ರಂದು ಸಿಎಸ್‌ಎಂಟಿ-ಮಡ್ಗಾಂವ್ ವಂದೇ ಭಾರತ್ ರೈಲನ್ನು ಆರಂಭಿಸಲಾಗಿದೆ. ಇದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಇದರಲ್ಲಿ ಪ್ರಯಾಣಿಸುತ್ತಿದ್ದ ಹಿಮಾಂಶು ಮುಖರ್ಜಿ ಅವರು ರೈಲಿನಲ್ಲಿ ಮಸೂರ (ದಾಲ್) ಮತ್ತು ಪನೀರ್ ಕರಿ ತೆಗೆದುಕೊಂಡಿದ್ದರು. ಇದರಲ್ಲಿ ಮನುಷ್ಯರ ಉಗುರು ಇರುವುದು ಅವರಿಗೆ ಕಂಡುಬಂದಿದೆ. ಅದನ್ನು ವಿಡಿಯೊ ಮಾಡಿದ ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೈಲಿನಲ್ಲಿ ಕಳಪೆ ಗುಣಮಟ್ಟದ ಆಹಾರ ಬಳಸುತ್ತಿದ್ದೀರಿ ಎಂದು ಅನೇಕ ಪ್ರಯಾಣಿಕರು ಅಧಿಕಾರಿಗಳ ಮುಂದೆ ದೂರು ನೀಡಿದ್ದಾರೆ. ರೈಲಿನ ಸೇವೆಗಳು ಸುಧಾರಿಸಬೇಕೆಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.