ಬೆಂಗಳೂರು: ತಾಜ್ ವೆಸ್ಟ್ಎಂಡ್ ಸಭೆ ನಡೆಸಿದ ವಿಪಕ್ಷಗಳು ಮಹಾಘಟಬಂಧನಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದು, ಮುಂಬೈನಲ್ಲಿ ಮುಂದಿನ ಸಭೆ ನಡೆಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಘೋಷಿಸಿದರು.
ಸಭೆಯ ನಿರ್ಣಯಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಇದೊಂದು ಮಹತ್ವದ ಸಭೆಯಾಗಿದೆ. ಪ್ರಜಾಪ್ರಭುತ್ವ ಉಳಿಸಲು ಹಾಗೂ ಜನರ ಹಿತದೃಷ್ಟಿಯಿಂದ ಅತಿ ಮುಖ್ಯವಾಗಿತ್ತು. ಒಗ್ಗಟ್ಟಿನ ಮಂತ್ರದೊಂದಿಗೆ ನಾವು ಹಲವು ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಮಹಾ ಮೈತ್ರಿಗೆ Indian national developmental inclusive alliance ಎಂದು ನಾಮಕಾರಣ ಮಾಡಲಾಗಿದೆ. ಈ ಹೆಸರನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಇದೊಂದು ದೊಡ್ಡ ಸಾಧನೆಯಾಗಲಿದೆ ಎಂದು ಅವರು ತಿಳಿಸಿದರು.
11 ಸಮನ್ವಯ ಸಮಿತಿ ರಚಿಸಲಾಗುವುದು. ಅದನ್ನು ಶೀಘ್ರದಲ್ಲೇ ರಚನೆ ಮಾಡುತ್ತೇವೆ. ಮಹಾರಾಷ್ಟ್ರದ ಮುಂಬೈನಲ್ಲಿ ಮುಂದಿನ ಸಭೆ ಮಾಡಲಿದ್ದೇವೆ. ಅಲ್ಲಿ ಸಮನ್ವಯ ಸಮಿತಿಯ 11 ಮಂದಿ ಸದಸ್ಯರ ಹೆಸರು ಫೈನಲ್ ಮಾಡಲಾಗುವುದು. ಮುಂದಿನ ಸಭೆಯ ದಿನಾಂಕವನ್ನು ಸದ್ಯದಲ್ಲೇ ಘೋಷಣೆ ಮಾಡಲಾಗುವುದು ಎಂದು ಖರ್ಗೆ ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನವನ್ನು ನಾಶ ಮಾಡುತ್ತಿದೆ. ತನಿಖಾ ಏಜೆನ್ಸಿಗಳ ಮೂಲಕ ವಿಪಕ್ಷ ನಾಯಕರನ್ನು ಬೆದರಿಸುತ್ತಿದ್ದಾರೆ. ದೇಶ ನಮಗೆ ಮುಖ್ಯವಾಗಿದೆ. ರಾಜ್ಯಗಳಲ್ಲಿ ರಾಜಕೀಯವಾಗಿ ನಮ್ಮಲ್ಲಿ ವೈರುದ್ಯ ಇದ್ದರೂ ನಾವು ಒಟ್ಟಾಗಿದ್ದೇವೆ. ದೇಶವನ್ನು ರಕ್ಷಿಸಲು ನಾವು ಒಟ್ಟಾಗಿದ್ದೇವೆ. 26 ಪಕ್ಷಗಳು ಇಂದು ಸಭೆಯಲ್ಲಿ ಭಾಗವಹಿಸಿವೆ. ಇದನ್ನು ನೋಡಿ ಬಿಜೆಪಿ 30 ಪಕ್ಷಗಳ ಎನ್ಡಿಎ ಸಭೆಯನ್ನು ಕರೆದಿದ್ದಾರೆ. ಆ 30 ಪಕ್ಷಗಳು ಯಾವುದು ಎಂದು ನಮಗೆ ಗೊತ್ತಿಲ್ಲ. ಅವುಗಳು ನೋಂದಣಿಯಾಗಿವೆಯೇ ಎಂದು ವ್ಯಂಗ್ಯವಾಡಿದರು.
ಇಂಡಿಯಾ ಗೆಲ್ಲುತ್ತೆ, ಎನ್ಡಿಎ ಸೋಲುತ್ತೆ
‘ಇಂಡಿಯಾ’ಕ್ಕೆ ಎನ್ ಡಿಎ ಸವಾಲು ಮಾಡಲಿದೆಯಾ, ಭಾರತಕ್ಕೆ ಮೋದಿ ಕೂಟ ಸವಾಲಾಗಲು ಸಾಧ್ಯವೇ ಇಲ್ಲ. ದೇಶವನ್ನು ಉಳಿಸಲು ನಾವು ಒಂದಾಗಬೇಕಿದೆ. ದೇಶ, ನಮ್ಮ ಸಂಸ್ಥೆಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಚಾಲೆಂಜ್ ಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದರು.
ಇಂಡಿಯಾ ಗೆಲ್ಲುತ್ತೆ, ಎನ್ಡಿಎ ಸೋಲುತ್ತೆ. ದೇಶದ ಪ್ರತಿ ಜನರೂ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. 26 ಪಕ್ಷಗಳ ನಾಯಕರು ದೇಶಕ್ಕಾಗಿ ಒಂದಾಗಿದ್ದೇವೆ ಎಂದು ಮಮತಾ ಹೇಳಿದರು.
ಮಣಿಪುರ, ಹಿಮಾಚಲ ಪ್ರದೇಶ, ಪಶ್ಚಿಮಬಂಗಾಳ, ಬಿಹಾರ, ಮಹಾರಾಷ್ಟ್ರ ಸರ್ಕಾರ ಪತನ ಮಾಡುವುದು ಕೇಂದ್ರ ಸರ್ಕಾರದ ಕೆಲಸವಾಗಿದೆ. ಇಂಡಿಯಾವನ್ನು ಬಿಜೆಪಿ ಚಾಲೆಂಜ್ ಮಾಡುತ್ತದಾ?, ನಾವು ಯುವಕರಿಗಾಗಿ, ರೈತರಿಗಾಗಿ, ದಲಿತರಿಗಾಗಿ, ದೇಶಕ್ಕಾಗಿ ಇದ್ದೇವೆ. ದೇಶವನ್ನು ಬಿಜೆಪಿ ಮಾರಾಟದ ವಸ್ತುವನ್ನಾಗಿ ಮಾಡಿಕೊಂಡಿದೆ. ಪ್ರಜಾಪ್ರಭುತ್ವ ಖರೀದಿಸುವ ವ್ಯಾಪಾರವನ್ನಾಗಿ ಮಾಡಿಕೊಂಡಿದೆ. ಭಾರತ ಗೆಲ್ಲುತ್ತೆ, ಬಿಜೆಪಿ ಸೋಲುತ್ತೆ, ಇಂಡಿಯಾ ಗೆಲ್ಲುತ್ತೆ ಭಾರತ ಉಳಿಯಲಿದೆ ಎಂದು ಮಮತಾ ಘೋಷಿಸಿದರು.
ದೇಶವೇ ನಮ್ಮ ಪರಿವಾರ:
ದೇಶವೇ ನಮ್ಮ ಪರಿವಾರವಾಗಿದೆ. ನಾವು ಪಕ್ಷಕ್ಕಾಗಿ, ಅಧಿಕಾರಕ್ಕಾಗಿ ಹೋರಾಡುತ್ತಿಲ್ಲ. ದೇಶಕ್ಕಾಗಿ ಹೋರಾಡುತ್ತೇವೆ. ಇದೊಂದು ಸ್ವಾತಂತ್ರ್ಯ ಹೋರಾಟ ಇದ್ದಂತೆ. 26 ಪಕ್ಷಗಳ ಸೇರಿಕೊಂಡು ಭಯದಲ್ಲಿರುವ ಪ್ರತಿಯೊಬ್ಬರಿಗೆ ಧೈರ್ಯ ತುಂಬಲು ನಾವಿದ್ದೇವೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದರು.
ದೇಶವನ್ನು ಎದುರಿಸುತ್ತಿರುವವರ ವಿರುದ್ಧ ನಮ್ಮ ಹೋರಾಟ. ಇಂಡಿಯಾ ಮತ್ತು ಮೋದಿ ನಡುವಿನ ಸಂಗ್ರಾಮವಿದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ದೇಶವನ್ನು ಮಾರಾಟ ಮಾಡುತ್ತಿರುವ ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳ ಇಂಡಿಯಾ ಸೆಣಸಾಡಲಿದೆ ಎಂದು ಅವರು ಹೇಳಿದರು.