ಮೈಸೂರು: ಶಿವಯೋಗಿ ಶ್ರೀ ಶಿವಪಾದ ಸ್ವಾಮಿಗಳ ಆರಾಧನೆ, ಶಿವಪಾದ ಗುರುಸೇವಾ ನಂದಿಧ್ವಜ ಸಂಘದ ೮೭ನೇ ವಾರ್ಷಿಕೋತ್ಸವ ಹಾಗೂ ನೂತನ ನಂದಿಧ್ವಜವನ್ನು ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಂದೀ ಧ್ವಜ ಮೈಸೂರು ಭಾಗದಲ್ಲಿ ಪ್ರಸಿದ್ಧಿಯಾಗಿದೆ. ದಸರಾ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶುಭ ನಂದಿಕಂಬ ಇರಲೇಬೇಕು. ದೇವಸ್ಥಾನಗಳಲ್ಲಿ ನಂದಿ ಧ್ವಜವನ್ನು ಕಾಣುತ್ತೇವೆ. ಇದು ಸ್ಥಿರ ಕಂಬವಾಗಿರುತ್ತದೆ. ನಾನಾ ಧಾರ್ಮಿಕ ಕಾರ್ಯಗಳಲ್ಲಿ ನಂದಿ ಧ್ವಜ ಚಾಲನೆಗೆ ಒಳಪಡುತ್ತದೆ. ನಂದಿಕಂಬವನ್ನು ಹೊತ್ತಿ ಕುಣಿಯುವುದನ್ನು ನೋಡುವುದೇ ಒಂದು ಸೋಜಿಗ. ಈ ರೀತಿಯ ಆಚರಣೆಯನ್ನು ೮೭ ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಮೈಸೂರಿನ ಶಿವಪಾದ ಗುರುಸೇವಾ ನಂದಿಧ್ವಜ ಸಂಘ ನಮ್ಮ ಸಾಂಸ್ಕೃತಿಕ ಆಚರಣೆಯನ್ನು ಉಳಿಸಿಕೊಂಡು ಬರುತ್ತಿದೆ. ಈ ವಿಶೇಷ ಕಾರ್ಯದಲ್ಲಿ ತೊಡಗಿಸಿಕೊಂಡುರುವ ಈ ಸಂಘ ಶತಮಾನೋತ್ಸವ ಆಚರಿಸಲೆಂದು ಶುಭ ಕೋರಿದರು.
ಇದೇ ವೇಳೆ ವೀರಶೈವ ನಂದಿಧ್ವಜ ಸಂಘ ಎಂ.ಎನ್. ಚಂದ್ರಶೇಖರ, ಗೌರಿ ಶಂಕರ ನಂದಿಧ್ವಜ ಸಂಘದ ಅಧ್ಯಕ್ಷ ಮಹದೇವಪ್ಪ ಉಡಿಗಾಲ, ಗುರುಮಲ್ಲೇಶ್ವರ ನಂದಿಧ್ವಜ ಸಂಘದ ಮಲ್ಲೇಶಯ್ಯ ಅವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಅಗ್ರಹಾರದ ೧೦೧ ಗಣಪತಿ ದೇವಸ್ಥಾನದ ಆವರಣದಿಂದ ಬಸವೇಶ್ವರ ರಸ್ತೆಯ ಶಿವಪಾದ ಗುರುಸೇವಾ ನಂದಿಧ್ವಜ ಸಂಘದವರೆಗೆ ನೂತನ ನಂದಿಧ್ವಜ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಮಂಗಳ ವಾದ್ಯ, ಮಂಗಳ ಕಹಳೆಯನ್ನು ಒಳಗೊಂಡ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.
ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ, ಮೇಯರ್ ಶಿವಕುಮಾರ್, ಶಾಸಕರಾದ ಶ್ರೀವತ್ಸ, ಗಣೇಶ್ ಪ್ರಸಾದ್, ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್, ಶಿವಪಾದ ಗುರುಸೇವಾ ನಂದಿಧ್ವಜ ಸಂಘದ ಅಧ್ಯಕ್ಷ ಆರ್. ಅಂಕಯ್ಯ ಹಾಗೂ ಇತರರು ಇದ್ದರು.