ಮೈಸೂರು: ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನ ಇಲಾಖೆಗಳಲ್ಲಿ ರೈತರಿಗೆ ದೊರಕುವ ವ್ಯವಸಾಯ ಸಂಬಂಧಿತ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲು ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡು ತಿಂಗಳ ಕಾಲ ರೈತರ ನರೇಗಾ ಮಾಸಾಚರಣೆ ಕೈಗೊಳ್ಳಲಾಗಿದೆ ಎಂದು ಮೈಸೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಕ ಅಧಿಕಾರಿ ಎಚ್.ಡಿ.ಗಿರೀಶ್ ತಿಳಿಸಿದರು.
ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರಿಗೆ ಅನೇಕ ಸೌಲಭ್ಯ ಸಿಗಲಿದ್ದು, ರೈತರು ಹೆಚ್ಚಿನ ಮಟ್ಟದಲ್ಲಿ ಸದುಪಯೋಗ ಮಾಡಿಕೊಳ್ಳಬೇಕು. ರೈತರಿಗೆ ಅನುಕೂಲವಾಗಲೆಂದೇ ಈ ಎರಡು ತಿಂಗಳ ಕಾಲ ಮಾಸಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಅವಧಿಯಲ್ಲಿ ನರೇಗಾ ಯೋಜನೆಯ ಅನುಷ್ಠಾನ ಇಲಾಖೆಗಳಾದ ಕೃಷಿ, ರೇಷ್ಮೆ, ತೋಟಗಾರಿಕೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮಟ್ಟದಲ್ಲಿ ರೈತರಿಗೆ ಸ್ಪಂದಿಸಬೇಕು. ಈಗಾಗಲೇ ಬೇಡಿಕೆ ಪಡೆದು ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಸೌಲಭ್ಯಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆಯಲ್ಲಿ ಕಂದಕ ಬದು ನಿರ್ಮಾಣ, ಎರೆಹುಳು ಘಟಕ, ನೀರುಗಾಲುವೆ ನಿರ್ಮಾಣ ಮತ್ತು ರೇಷ್ಮೆ ಇಲಾಖೆಯಲ್ಲಿ ಹಿಪ್ಪು ನೇರಳೆ ನಾಟಿ, ನರ್ಸರಿ, ಮರಗಡ್ಡಿ ಪದ್ಧತಿ, ಸಾಮಾಜಿಕ ಅರಣ್ಯದಲ್ಲಿ ರೈತರಿಗೆ ಗಿಡ ವಿತರಣೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಬಾಳೆ, ತೆಂಗು, ಪಪ್ಪಾಯ, ಮಾವು, ಸೀಬೆ, ನುಗ್ಗೆ, ಮೈಸೂರು ಮಲ್ಲಿಗೆ, ವೀಳ್ಯ ಎಲೆ, ಗುಲಾಬಿ, ಡ್ರಾಗನ್ ಫ್ರೂಟ್, ನಿಂಬೆ ಸೇರಿದಂತೆ ವಿವಿಧ ಬೆಳೆಗಳನ್ನು ನರೇಗಾ ಯೋಜನೆಯಡಿ ಬೆಳೆಯಬಹುದು ಎಂದು ಮಾಹಿತಿ ನೀಡಿದರು.
ಈಗಾಗಲೇ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಫಲಾನುಭವಿಗಳು ಸಂಬಧಿಸಿದ ಅಧಿಕಾರಿಗಳು ಮತ್ತು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಪಡೆದು ಬೆಳೆಗಳನ್ನು ಬೆಳೆಯುವುದು. ಸೌಲಭ್ಯ ಪಡೆಯಲು ಇಚ್ಛಿಸುವ ರೈತರು ಹೆಚ್ಚುವರಿ ಕ್ರಿಯಾಯೋಜನೆ ಸಿದ್ಧಪಡಿಸಲು ಹೆಸರು ನೋಂದಾಯಿಸಿಕೊಳ್ಳಬಹುದು. ಈ ಎರಡು ತಿಂಗಳ ಅವಧಿಯಲ್ಲೇ ಫಲಾನುಭವಿಗಳಿಗೆ ಕೂಲಿ ಹಾಗೂ ಸಾಮಾಗ್ರಿ ವೆಚ್ಚ ದೊರಕಿಸಿಕೊಡಲಾಗುವುದು ಎಂದರು.
ಮಾಸಾಚರಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ರೈತರಿಗೆ ಸೌಲಭ್ಯ ದೊರಕಿಸಿಕೊಡುವುದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ, ಹೆಚ್ಚಿನ ಸಮಯ ಮೀಸಲಿಡಬೇಕು. ಅದರಂತೆ ರೈತ ಫಲಾನುಭವಿಗಳು ಕೂಡ ಸೌಲಭ್ಯ ಪಡೆಯುವ ಮೂಲಕ ಸಹಕರಿಸಬೇಕು ಎಂದರು.
ಸಭೆಯಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್, ಅನುಷ್ಠಾನ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ತಾಂತ್ರಿಕ ಅಭಿಯಂತರರು ಹಾಜರಿದ್ದರು.