ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್ ನಗರ: ಪಟ್ಟಣದಲ್ಲಿ ನಮ್ಮೂರ ಹನುಮೋತ್ಸವದ ಅಂಗವಾಗಿ ಶೋಭಾ ಯಾತ್ರೆ ಅತ್ಯಂತ ವಿಜೃಂಭಣೆಯಿಂದ ಶನಿವಾರ ಸಾವಿರಾರು ಮಂದಿ ಹನುಮ ಭಕ್ತರ ಸಮುಖದಲ್ಲಿ ನೆರವೇರಿತು.
ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಆಂಜನೇಯ ಬಡಾವಣೆಯ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಶ್ರೀಗಳು ಮತ್ತು ಶಾಸಕ ಡಿ. ರವಿಶಂಕರ್ ಪೂಜೆ ಸಲ್ಲಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು.
ಆನಂತರ ಆಂಜನೇಯ ಸ್ವಾಮಿಯ ಭವ್ಯ ಮೂರ್ತಿಯ ಶೋಭಾ ಯಾತ್ರೆಯು ಬಜಾರ್ ರಸ್ತೆ, ಗರುಡಗಂಭ ವೃತ್ತ, ಹಾಸನ ಮೈಸೂರು ರಸ್ತೆ, ಪುರಸಭೆ ವೃತ್ತ ಮತ್ತು ಸಿಎಂ ರಸ್ತೆಯಲ್ಲಿ ಸಾಗಿ ಆನಂತರ ದೇವಾಲಯಕ್ಕೆ ಬಂದು ಸೇರಿತು. ಈ ಸಂದರ್ಭದಲ್ಲಿ ವಿವಿಧ ಕಲಾ ತಂಡಗಳು, ನಗಾರಿ ಪೂಜಾ ಕುಣಿತ ವೀರಗಾಸೆ ಕುಣಿತ ಮಂಗಳವಾದ್ಯದ ಸಮೇತ ಆಂಜನೇಯ ಸ್ವಾಮಿಯ ಭವ್ಯ ಮೂರ್ತಿಯನ್ನು ಅತ್ಯಂತ ವೈಭವದಿಂದ ಮೆರವಣಿಗೆ ಮಾಡಲಾಯಿತು.
ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ಯುವಕ ಮತ್ತು ಯುವತಿಯರು ಶ್ರೀರಾಮ ಮತ್ತು ಆಂಜನೇಯ ಸ್ವಾಮಿಯ ಭಜನೆ ಮಾಡಿದರಲ್ಲದೆ ದೇವರ ನಾಮಗಳಿಗೆ ಕುಣಿದು ಭಕ್ತಿಯ ಪರಾಕಾಷ್ಠೆ ಮೆರೆದರು.
ಶೋಭಾ ಯಾತ್ರೆಯ ಅಂಗವಾಗಿ ಆಂಜನೇಯ ಸ್ವಾಮಿ ಮೂರ್ತಿಯ ಮೆರವಣಿಗೆ ತೆರಳುವ ರಸ್ತೆಗಳ ಇಕ್ಕೆಲಗಳಲ್ಲಿ ಕೇಸರಿ ಬಾವುಟ ಮತ್ತು ಬ್ಯಾನರ್ ಅಳವಡಿಸುವುದರ ಜತೆಗೆ ತಳಿರು ತೋರಣ ಕಟ್ಟಿ ದೇವರಿಗೆ ಭವ್ಯ ಸ್ವಾಗತ ಕೋರಲಾಯಿತು.
ಪಟ್ಟಣ ಸೇರಿದಂತೆ ಸಾಲಿಗ್ರಾಮ ಮತ್ತು ಕೆ. ಆರ್. ನಗರ ತಾಲೂಕಿನ ಗ್ರಾಮಾಂತರ ಪ್ರದೇಶದ ಸಾವಿರಾರು ಮಂದಿ ಯುವಕ ಯುವತಿಯರು ಮತ್ತು ಭಕ್ತಾದಿಗಳು ಯಾತ್ರೆಯಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ಬಾವ ಪರವಶರಾದರು.

ಹನುಮ ಜಯಂತಿ ಮತ್ತು ಶೋಭಾ ಯಾತ್ರೆಯ ಅಂಗವಾಗಿ ಡಿಸೆಂಬರ್ 13 ರಿಂದ ಪಟ್ಟಣದ ಆಂಜನೇಯ ಬಡಾವಣೆಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮಾರುತಿ ಯುವಕರ ಸಂಘ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಗಳು ಕುಸ್ತಿ ಪಂದ್ಯಾವಳಿ ಸೇರಿದಂತೆ ಹೋಮ ಹವನಗಳನ್ನು ನಡೆಸಲಾಯಿತು.
ಹನುಮ ಜಯಂತಿ ಮತ್ತು ಶೋಭಾ ಯಾತ್ರೆಯ ಅಂಗವಾಗಿ ಆಂಜನೇಯ ಸ್ವಾಮಿ ಮೂರ್ತಿಯ ಭವ್ಯ ಮೆರವಣಿಗೆ ಹಾಸನ- ಮೈಸೂರು ಮುಖ್ಯ ರಸ್ತೆಯಲ್ಲಿರುವ ಗರುಡಗಂಭ ವೃತ್ತದಲ್ಲಿ ಸಂಚರಿಸಿದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಭಕ್ತರಿಗೆ ಹಣ್ಣು ಸಿಹಿ ಜತೆಗೆ ಮಜ್ಜಿಗೆ ನೀಡಿ ದೇವರಿಗೆ ನಮಿಸಿ ಭಾವೈಕ್ಯತೆ ಮೆರೆದರು.
ಇವರ ಜೊತೆಗೆ ರಾಜಸ್ಥಾನ ಸಮಾಜದವರು, ಗಿರವಿ ಅಂಗಡಿಗಳ ಮಾಲೀಕರು, ಮಿಲ್ಟ್ರಿ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಮತ್ತು ಇತರ ಸಂಘ ಸಂಸ್ಥೆಯವರು ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿಗೆ ಪ್ರಸಾದ ಮತ್ತು ಮಜ್ಜಿಗೆ ವಿತರಿಸಿದರು.
ಕೇಶಲಂಕಾರಿಗಳು ಮತ್ತು ಮಂಗಳ ವಾದ್ಯಗಾರರ ಸಂಘದ ವತಿಯಿಂದ ದೇವರ ಮೆರವಣಿಗೆ ಯುದ್ಧಕ್ಕೂ ದೇವರ ನಾಮ ನುಡಿಸುವ ಮೂಲಕ ಉಚಿತ ಸೇವೆ ಸಲ್ಲಿಸಿ ಹರಕೆ ತೀರಿಸಿಕೊಂಡರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಯುವತಿಯರು ಶ್ರೀರಾಮ ದೇವರು ಮತ್ತು ಹನುಮಂತನ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಎಲ್ಲರ ಗಮನ ಸೆಳೆದರು.
ಹನುಮ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ನಡೆದ ಶೋಭಾ ಯಾತ್ರೆಯ ಅಂಗವಾಗಿ ಎಲ್ಲೆಡೆ ಕೇಸರಿ ಬಾವುಟಗಳು ಹಾರಾಡಿದ್ದರಿಂದ ಇಡೀ ನಗರವೇ ಕೇಸರಿಮಯವಾಗಿ ಕಂಗೊಳಿಸಿತು. ಮುನ್ನೆಚ್ಚರಿಕೆ ಕ್ರಮವಾಗಿ ಡಿವೈಎಸ್ಪಿ ಕರೀಂರಾವತ್, ಪೋಲೀಸ್ ಇನ್ಸ್‌ಪೆಕ್ಟರ್ ಎಸ್.ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಾರುತಿ ಯುವಕರ ಸಂಘದ ಅಧ್ಯಕ್ಷ ಗೌತಮ್ ಜಾದವ್, ಗೌರವಾಧ್ಯಕ್ಷರಾದ ಎಸ್. ಯೋಗಾನಂದ, ವೇಣುಗೋಪಾಲ್, ಕಾರ್ಯದರ್ಶಿ ವಿನಯ್, ಖಜಾಂಚಿ ಮಂಜುಕೆಂಚಿ, ಪದಾಧಿಕಾರಿಗಳಾದ ಲೋಕೇಶ್, ಶ್ರೀನಿವಾಸ್, ದರ್ಶನ್, ಅರುಣ್, ಪುನೀತ್, ಉಜ್ವಲ್ ಧನುಷ್, ಪುಟ್ಟಸ್ವಾಮಿ, ನರಸಿಂಹರಾಜು, ಜಯರಾಮ್, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಸಾರ್ವಜನಿಕ ಹನುಮ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಯು.ಕೃಷ್ಣಭಟ್, ಸಂಚಾಲಕ ಪವನ್ , ಪುರಸಭೆ ಸದಸ್ಯರಾದ ಕೆ.ಜಿ. ಸುಬ್ರಮಣ್ಯ, ಶಿವುನಾಯಕ್, ಉಮೇಶ್, ನಟರಾಜು, ಶಂಕರ್ ಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಮಾಜಿ ಅಧ್ಯಕ್ಷ ವೈ. ಎಸ್. ಕುಮಾರ್, ದೊಡ್ಡೇಕೊಪ್ಪಲು ಗ್ರಾ.ಪಂ. ಸದಸ್ಯ ಕೆ.ಪಿ. ಜಗದೀಶ್ ಮತ್ತಿತರರು ಇದ್ದರು.