ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸುವರ್ಣ ಸಂಭ್ರಮ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ, ಕನ್ನಡಿಗ, ಕರ್ನಾಟಕ ಹಾಗೂ ಸಂವಿಧಾನ ದಿನವನ್ನು ಆಚರಿಸಲಾಯಿತು.
ಕನ್ನಡಾಂಬೆ ಹಾಗೂ ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಸಮಾಜ ಸೇವಕ ಸುರೇಶ್ ಗೌಡ ಹಾಗೂ ಮುಖಂಡ ಬಸವನಪುರದ ಜಡೇಸ್ವಾಮಿ ರವರು ಉದ್ಘಾಟಿಸಿದರು.
ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಮುಖಂಡರಾದ ರವಿಚಂದ್ರ ಪ್ರಸಾದ್ ರವರು ಮಾತನಾಡಿ, ಸಂವಿಧಾನ ಸಮರ್ಪಣಾ ದಿನವನ್ನು ನವೆಂಬರ್ 26ರಂದು ದೇಶದ ಎಲ್ಲೆಡೆ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂಕೇತವಾಗಿ ಇಡೀ ರಾಷ್ಟ್ರದ ಜನ ಸಂವಿಧಾನಾತ್ಮಕವಾಗಿ ಒಂದುಗೂಡಿ ಇಂದು ಭಾರತ ವಿಶ್ವದಲ್ಲಿ ಶ್ರೇಷ್ಠವಾದ ಸಂವಿಧಾನವನ್ನು ಸ್ವೀಕರಿಸಿರುವುದು ಹೆಮ್ಮೆ ಎಂದರು.
ಕಾನೂನು ಗೌರವಿಸುವ ಮೂಲಕ ಪ್ರತಿಯೊಬ್ಬರು ಉತ್ತಮ ಮಾರ್ಗದಲ್ಲಿ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಕನ್ನಡಿಗ ಕರ್ನಾಟಕ ವಿಶಾಲ ವ್ಯಾಪ್ತಿಯಾಗಿದ್ದು ಮಾತೃಭಾಷೆ ಕನ್ನಡವನ್ನು ನಾವೆಲ್ಲರೂ ಪ್ರೀತಿಸೋಣ ಹಾಗೂ ಆಚರಿಸೋಣ. ಕನ್ನಡ ಸಂಸ್ಕೃತಿ, ಪರಂಪರೆ ಸಾಹಿತ್ಯ, ಸಂಗೀತ, ಕಲೆ ,ವಾಸ್ತು ಶಿಲ್ಪ ಸಂರಕ್ಷಣೆ ಬಹು ಮುಖ್ಯವಾಗಿದೆ. ಕನ್ನಡಿಗ ಇಂದು ವಿಶ್ವ ವ್ಯಾಪಿಯಾಗಿದ್ದು, ಎಲ್ಲಾ ಕ್ಷೇತ್ರಗಳನ್ನು ಅದ್ಭುತ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕರ್ನಾಟಕ ರಾಜ್ಯ ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದು ಕೈಗಾರಿಕೆ ನೀರಾವರಿ, ಕೃಷಿ, ವಿಜ್ಞಾನ ,ತಂತ್ರ ಜ್ಞಾನ, ಬಾಹ್ಯಾಕಾಶ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಸಾಗುತ್ತಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕು ಎಂದು ತಿಳಿಸಿದರು.
ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ, ದೂರದೃಷ್ಟಿಯ ಚಿಂತನೆ ಹಾಗೂ ಅಧ್ಯಯನದ ಮೂಲಕ ವಿಶ್ವಮಾನ್ಯವಾದ ಸಂವಿಧಾನವನ್ನು ನೀಡಿದ ಬಿ ಆರ್ ಅಂಬೇಡ್ಕರ್ ಹಾಗೂ ಎಲ್ಲಾ ಸಮಿತಿಯ ಸದಸ್ಯರಿಗೆ ನಾವು ಗೌರವವನ್ನು ಅರ್ಪಿಸುವ ದಿನವೇ ಸಂವಿಧಾನ ದಿನವಾಗಿದೆ. ರಾಷ್ಟ್ರ ಸಮಗ್ರ ಅಭಿವೃದ್ಧಿಯಾಗಿ ಮುನ್ನಡೆ ಸಾಧಿಸುತ್ತಿದೆ ಎಂದು ಹೇಳಿದರು.