ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬಯಲು ಶೌಚಾಲಯ ಹಾಗೂ ಬರಿಗಾಲಿನಲ್ಲಿ ನಡೆಯು ವುದನ್ನು ಬಿಟ್ಟಲ್ಲಿ ಜಂತುಹುಳು ರೋಗವನ್ನು ತಡೆಗಟ್ಟಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಡಿ.ನಟರಾಜ್ ಹೇಳಿದರು.
ಪಟ್ಟಣದ ಕೆಜಿಬಿವಿ ಶಾಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.’ದೇಹದಲ್ಲಿ ಜಂತುಹುಳು ಸೇರಿದಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಸುಸ್ತಾಗುವುದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಶಾಲೆಯಿಂದ ದೂರ ಉಳಿಯಲು ಕಾರಣವಾಗುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ಜಂತುಹುಳು ಮಾತ್ರೆಗಳನ್ನು ಸೇವಿಸುವುದರಿಂದ ರೋಗದಿಂದ ದೂರ ಉಳಿಯಬಹುದು,” ಎಂದು ಸಲಹೆ ನೀಡಿದರು.
“ತಾಲೂಕಿನಲ್ಲಿ ಅಂಗನವಾಡಿಯಿಂದ ಪದವಿ ತರಗತಿವರೆಗೆ 49,938 ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಲಾಗುತ್ತಿದೆ. ಇಂದು ಮಾತ್ರೆ ಪಡೆಯದೆ ಇದ್ದವರು ಡಿ.14ರಂದು ಪಡೆಯಬಹುದು. ಮಕ್ಕಳಲ್ಲಿ ಅಲ್ಲದೆ ಹಿರಿಯರಲ್ಲೂ ಜಂತುಹುಳು ಕಾಡುವುದರಿಂದ ತಪ್ಪದೆ ವರ್ಷಕ್ಕೆ ಎರಡು ಬಾರಿ ಜಂತುಹುಳು ಮಾತ್ರೆ ತೆಗೆದುಕೊಳ್ಳಿ,” ಎಂದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಸಿಡಿಪಿಒ ಅಣ್ಣಯ್ಯ, ಮುಖ್ಯ ಶಿಕ್ಷಕಿ ಎಚ್.ಎಸ್.ಪುಷ್ಪಾವತಿ ಮತ್ತಿತರರು ಮಾತನಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿಗೌಡ,
ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಸುಮಲತಾ ಹಾಗೂ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ, ಶಾಲೆಯ ವಿದ್ಯಾರ್ಥಿನಿಯರು ಹಾಜರಿದ್ದರು.