ಹೊಸದಿಲ್ಲಿ : ರಾಷ್ಟ್ರೀಯ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದ್ದು, ಈ ಬಗ್ಗೆ ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ರಾಷ್ಟ್ರೀಯ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದ ದೂರಿಗೆ ಯಾವುದೇ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದೆ ಎನ್ನಲಾಗಿದ್ದು, ಇದು ಕಾಂಗ್ರೆಸ್ ನಾಯಕರಿಗೆ ಸಿಕ್ಕ ಮಹತ್ವದ ಗೆಲುವಾಗಿದೆ.
ಈ ಬಗ್ಗೆ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು, ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರು, ತನಿಖಾ ವರದಿಯ ಆಧಾರದ ಮೇಲೆ ಇಲ್ಲದೆ, ಖಾಸಗಿ ದೂರಿನ ಮೇಲೆ ಆಧರಿತವಾಗಿರುವುದರಿಂದ ಅದು ಸ್ವೀಕಾರಾರ್ಹವಲ್ಲ ಹಾಗೂ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಈ ದೂರು ನ್ಯಾಯಾಲಯದಲ್ಲಿ ಮುಂದುವರಿಯಲು ಅರ್ಹತೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಲ್ಲದೆ, ಸುಮನ್ ದುಬೆ, ಸ್ಯಾಮ್ ಪಿಟ್ರೋಡಾ, ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಮತ್ತು ಸುನೀಲ್ ಭಂಡಾರಿ ಅವರನ್ನೂ ಜಾರಿ ನಿರ್ದೇಶನಾಲಯ ಆರೋಪಿಗಳನ್ನಾಗಿ ಮಾಡಿತ್ತು. ಆದರೆ, ನ್ಯಾಯಾಲಯದ ಇಂದಿನ ಆದೇಶವು ಈ ಎಲ್ಲ ಆರೋಪಿಗಳಿಗೆ ರಿಲೀಫ್ ನೀಡಿದೆ.
ಈ ಪ್ರಕರಣವು ರಾಷ್ಟ್ರೀಯ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಉದ್ಭವಿಸಿದ್ದು, ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದು ಆರೋಪಿಸಿತ್ತು. ಆದರೆ, ನ್ಯಾಯಾಲಯವು ದೂರಿನ ಮೂಲವನ್ನು ಪ್ರಶ್ನಿಸಿ, ಅದನ್ನು ಸ್ವೀಕರಿಸಲು ನಿರಾಕರಿಸಿದೆ. ಇದು ಜಾರಿ ನಿರ್ದೇಶನಾಲಯಗೆ ಹಿನ್ನಡೆಯಾಗಿದೆ. ನ್ಯಾಯಾಲಯದ ಈ ನಿರ್ಧಾರವು ಕಾಂಗ್ರೆಸ್ ಪಕ್ಷಕ್ಕೆ ಒಂದು ರೀತಿಯ ಗೆಲುವಾಗಿದೆ ಎಂದು ಹೇಳಲಾಗುತ್ತಿದೆ.
EDಯು ಸಲ್ಲಿಸಿದ್ದ ಹಣ ಅಕ್ರಮ ವರ್ಗಾವಣೆ ಆರೋಪಗಳನ್ನು ನ್ಯಾಯಾಲಯವು ಒಪ್ಪಿಕೊಳ್ಳಲು ನಿರಾಕರಿಸಿರುವುದು ಪ್ರಕರಣದ ಮುಂದಿನ ಬೆಳವಣಿಗೆಗಳಿಗೆ ಮಹತ್ವದ ತಿರುವು ನೀಡಿದ್ದ, ಈ ಪ್ರಕರಣವು ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಖಾಸಗಿ ದೂರಿನಿಂದ ಆರಂಭವಾಗಿದ್ದು, FIR ದಾಖಲಿಸದೆ ಖಾಸಗಿ ದೂರಿನ ಆಧಾರದ ಮೇಲೆ ED ತನಿಖೆ ನಡೆಸಿತ್ತು. ಆದರೆ, ನ್ಯಾಯಾಲಯವು FIR ಇಲ್ಲದೆ ಖಾಸಗಿ ದೂರಿನ ಮೇಲೆ PMLA ಅಡಿಯಲ್ಲಿ ಆರೋಪ ಪಟ್ಟಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.



