ನವದೆಹಲಿ: ಕಾಂಗ್ರೆಸ್ ನಡೆಸುತ್ತಿದ್ದ ನ್ಯಾಷನಲ್ ಹೆರಾಲ್ಡ್ ಪ್ರತಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣಗಳು, ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಸದ ರಾಹುಲ್ ಗಾಂಧಿಗೆ ನೊಟೀಸ್ ನೀಡಲು ಜಾರಿ ನಿರ್ದೇಶನಾಲಯ (ಇಡಿ) ಸಿದ್ಧತೆ ನಡೆಸಿದೆ.
ನೊಟೀಸ್ ನೀಡುವ ಮೂಲಕ ಇಡಿಯು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಶೀಘ್ರದಲ್ಲೇ ಕರೆಸಿಕೊಳ್ಳಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಸಂಸ್ಥೆ ಈಗಾಗಲೇ ೭೫೧ ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದಕ್ಕೂ ಮೊದಲು ೨೦೨೨ರ ಜೂನ್ ನಲ್ಲಿ, ಇಡಿ ೪ ಸಭೆಗಳಲ್ಲಿ ರಾಹುಲ್ ಗಾಂಧಿಯನ್ನು ಸುಮಾರು ೪೦ ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
೨೦೨೨ರ ಜುಲೈನಲ್ಲಿ ೩ ದಿನಗಳ ಕಾಲ ಸುಮಾರು ೧೧ ಗಂಟೆಗಳ ಕಾಲ ಸೋನಿಯಾ ಗಾಂಧಿಯವರನ್ನೂ ಈ ವಿಷಯದಲ್ಲಿ ವಿಚಾರಣೆ ನಡೆಸಲಾಯಿತು. ಇನ್ನು ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯು ಸೋನಿಯಾ ಗಾಂಧಿ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಕರೆಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ.