Sunday, April 20, 2025
Google search engine

Homeಸ್ಥಳೀಯವಿಶ್ವಮಾನವ ಸಂದೇಶದ ಹರಿಕಾರ ರಾಷ್ಟ್ರಕವಿ ಕುವೆಂಪು: ಕೆ ಹರೀಶ್ ಗೌಡ

ವಿಶ್ವಮಾನವ ಸಂದೇಶದ ಹರಿಕಾರ ರಾಷ್ಟ್ರಕವಿ ಕುವೆಂಪು: ಕೆ ಹರೀಶ್ ಗೌಡ

ಮೈಸೂರು: ನಾಡಿಗೆ ವಿಶ್ವಮಾನವ ಸಂದೇಶ ಸಾರಿದ ಕನ್ನಡ ಸಾಹಿತ್ಯದ ಮೇರು ಕವಿ ಕುವೆಂಪು ಎಂದು ಚಾಮರಾಜ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ ಅವರು ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಮಾತನಾಡಿ, ಮನುಜಮತ, ವಿಶ್ವಪಥ ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಎಂಬ ಪಂಚಮಂತ್ರಗಳ ಹರಿಕಾರರಾದ ರಾಷ್ಟ್ರಕವಿ ಕುವೆಂಪು ಅವರ 119ನೇ  ಜನ್ಮದಿನದ ಶುಭಾಶಯಗಳನ್ನು ತಿಳಿಸಿದರು.

ನಾನು ಮಗುವಾಗಿದ್ದಾಗಲೇ ಕುವೆಂಪುರವರನ್ನು ನೇರವಾಗಿ ಕಂಡು, ಅವರ ತೊಡೆ ಮೇಲೆ ಕುಳಿತ  ಸಂತಸದ ಕ್ಷಣ ನನ್ನ ಜೀವಮಾನದುದ್ದಕ್ಕೂ ನನ್ನ ಜೊತೆಗಿರುತ್ತದೆ. ಕನ್ನಡದ ಶ್ರೇಷ್ಠ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿ ನಮ್ಮ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಕುವೆಂಪು ಅವರು ಹೆಚ್ಚಿಸಿದ್ದಾರೆ. 20 ನೇ ಶತಮಾನ ಕಂಡ ದೈತ್ಯ ಪ್ರತಿಭೆ, ರಸ ಋಷಿ, ಮೇರುಕವಿ ಅವರು ತಮ್ಮ ಸಾಹಿತ್ಯದ ಮೂಲಕ ಸದಾ ಜೀವಂತ ಎಂದು ಅಭಿಪ್ರಾಯಪಟ್ಟರು.

ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭಾ ಶಾಸಕರಾದ ಜಿ ಟಿ ದೇವೇಗೌಡ ಅವರು ಮಾತನಾಡಿ, ಕುವೆಂಪು ಅವರ ಜೀವನವೇ ಒಂದು ಮಹಾನ್ ಸಂದೇಶವಾಗಿತ್ತು. ಅವರು ಜಾತೀಯತೆ, ಅರ್ಥಹೀನ ಆಚರಣೆಗಳನ್ನು ವಿರೋಧಿಸುತ್ತಿದ್ದರು. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯ ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು ಎಂದು ತಿಳಿಸಿದರು.

ವಿಧಾನ ಪರಿಷತ್ತಿನ ಶಾಸಕರಾದ ಸಿ ಎನ್ ಮಂಜೇಗೌಡ ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಕುವೆಂಪುರವರ ಬರಹಗಳು ಅತ್ಯಂತ ಪ್ರಭಾವ ಬೀರುತ್ತವೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠ ಸಾಹಿತಿ ಕುವೆಂಪುರವರನ್ನು ಕನ್ನಡ ನಾಡು ಚಿರಕಾಲ ಸ್ಮರಿಸುತ್ತದೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಚ್ಎಲ್ ಮಲ್ಲೇಶಗೌಡ  ಅವರು ಮಾತನಾಡಿ, ಸಾಹಿತ್ಯದ ಎಲ್ಲಾ ಮಜಲುಗಳಲ್ಲಿ ಉತ್ತುಂಗದ ಶಿಖರವೇರಿದ ಕವಿ ಕುವೆಂಪು. ದ ರಾ ಬೇಂದ್ರೆಯವರು ಕುವೆಂಪುರವರನ್ನು ಯುಗದ ಕವಿ ಜಗದ ಕವಿ ಎಂದು ಹಾಡಿ ಹೊಗಳಿದ್ದಾರೆ. ಇಂದಿನ ಯುವ ಪೀಳಿಗೆಯಿಂದ ಕುವೆಂಪುರವರನ್ನು ಓದುವ ಕೆಲಸವಾಗಬೇಕು. ಕುವೆಂಪುರವರ ವಿಶ್ವಮಾನವ ಸಂದೇಶ ಸಾಕಾಗಾರಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶವನ್ನು  ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ತಿನ ಶಾಸಕರಾದ ಡಾಕ್ಟರ್ ಡಿ ತಿಮ್ಮಯ್ಯ, ಮೈಸೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಜಿ.ಎಸ್ ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್ ಸೇರಿದಂತೆ ಇತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular