ಶಿವಮೊಗ್ಗ: ರಾಸಾಯನಿಕ ಮುಕ್ತ ಆರೋಗ್ಯಕ್ಕಾಗಿ ಹಾಗೂ ಬೇಸಾಯದ ಖರ್ಚನ್ನು ಕಡಿಮೆ ಮಾಡುವಲ್ಲಿ ನೈಸರ್ಗಿಕ ಕೃಷಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಕೆ. ಟಿ. ಗುರುಮೂರ್ತಿ ತಿಳಿಸಿದರು.
ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ (ಮ್ಯಾನೇಜ್), ಹೈದರಾಬಾದ್ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವರ ಸಹಯೋಗದೊಂದಿಗೆ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ನೈಸರ್ಗಿಕ ಕೃಷಿ ಕುರಿತು ಏರ್ಪಡಿಸಲಾಗಿರುವ ಐದು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಕೃಷಿಕರಿಗೆ ನೂತನ ತಾಂತ್ರಿಕತೆಗಳು ಹಾಗೂ ಸೌಲಭ್ಯಗಳನ್ನು ತಲುಪಿಸುವಲ್ಲಿ ಕೃಷಿ ಸಖಿಯರ ಪಾತ್ರ ಬಹಳ ಮಹತ್ತರವಾಗಿದೆ. ನೈಸರ್ಗಿಕ ಕೃಷಿಯೊಂದಿಗೆ ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಲ್ಲಿ ರೈತರ ಆದಾಯ ದ್ವಿಗುಣಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ನೈಸರ್ಗಿಕ ಕೃಷಿಯಲ್ಲಿ ಜಾನುವಾರುಗಳ ಪಾತ್ರ ಅತಿ ಮುಖ್ಯ. ಜೈವಿಕ ಕಷಾಯಗಳನ್ನು ತಯಾರಿಸಿ, ತಮ್ಮ ತಮ್ಮ ಬೆಳೆಗಳ ಕೀಟ ಹಾಗೂ ರೋಗಗಳ ನಿರ್ವಹಣೆಯನ್ನು ಮಾಡಲು ಗೋಮೂತ್ರ ಹಾಗೂ ಸಗಣಿ ಬಹಳ ಮುಖ್ಯವೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹ ವಿಸ್ತರಣಾ ನಿರ್ದೇಶಕ ಡಾ. ಬಿ.ಸಿ.ಹನುಮಂತಸ್ವಾಮಿ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿ ಸಿಗುವ ಸ್ಥಳೀಯ ಬೆಳೆಗಳ ತ್ಯಾಜ್ಯಗಳಿಂದ ಗೊಬ್ಬರಗಳನ್ನು ತಯಾರಿಸಿ ಮರುಬಳಕೆ ಮಾಡುವುದರಿಂದ ಬೇಸಾಯದ ಖರ್ಚನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ವಿಜ್ಞಾನಿ ಡಾ. ಎನ್. ಸುಧಾರಾಣ ಮತ್ತು ವಿಜ್ಞಾನಿ ಡಾ. ರುದ್ರಗೌಡ, ಇವರು ನಡೆಸಿಕೊಟ್ಟರು. ಈ ತರಬೇತಿಯಲ್ಲಿ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ 35 ಕೃಷಿ ಸಖಿಯರು ಭಾಗವಹಿಸಿದ್ದರು.