Friday, April 18, 2025
Google search engine

Homeರಾಜ್ಯಸಂತ್ರಸ್ತ ಮಹಿಳೆಯರ ಭವಿಷ್ಯ ರೂಪಿಸಲು ಸರ್ಕಾರಕ್ಕೆ ನಯನಾ ಮೋಟಮ್ಮ ಪತ್ರ

ಸಂತ್ರಸ್ತ ಮಹಿಳೆಯರ ಭವಿಷ್ಯ ರೂಪಿಸಲು ಸರ್ಕಾರಕ್ಕೆ ನಯನಾ ಮೋಟಮ್ಮ ಪತ್ರ

ಮೂಡಿಗೆರೆ: ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಿಲುಕಿರುವ ಸಂತ್ರಸ್ತೆಯರ ಭವಿಷ್ಯ ಹಾಗೂ ಸಮಾಜದಲ್ಲಿ ಗೌರವವಾಗಿ ಬದುಕು ನಡೆಸುವಂತೆ ಕ್ರಮ ಕೈಗೊಳ್ಳಲು ಶಾಸಕಿ ನಯನಾ ಮೋಟಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಪ್ರಸ್ತುತ ಸಂತ್ರಸ್ತೆಯರು ತಮ್ಮ ಕುಟುಂಬಸ್ಥರಿಗೆ ಉತ್ತರಿಸಲಾಗದೆ ಮನೆ ಬಿಡುವ ಹಾಗೂ ನಾನಾ ರೀತಿಯ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತನಿಖೆ ಸಂದರ್ಭದಲ್ಲಿ ಪುರುಷ ಅಧಿಕಾರಿಗಳೊಂದಿಗೆ ಇಂತಹಸೂಕ್ಷ್ಮ ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸರ್ಕಾರ ತನಿಖೆಗಾಗಿ ಈಗಾಗಲೇ ವಿಶೇಷ ತಂಡ ಹಾಗೂ ಸಹಾಯವಾಣಿ ರಚಿಸಿದ್ದರೂ ಸಂತ್ರಸ್ತೆಯರ ಬಗ್ಗೆ ಗೌಪ್ಯತೆ ಕಾಪಾಡುವ ಜತೆಗೆ ವ್ಯಕ್ತಿತ್ವಕ್ಕೆ ಧಕ್ಕೆಯಾಗದಂತೆ ತನಿಖೆ ನಡೆಸಬೇಕೆಂದು ತಿಳಿಸಿದ್ದಾರೆ. ಮುಖ್ಯವಾಗಿ ಮಹಿಳಾ ಅಧಿಕಾರಿಗಳೊಂದಿಗೆ ಆ ಸಂತ್ರಸ್ತೆಯರು ಚರ್ಚಿಸಲು ಗೌಪ್ಯ ಸ್ಥಳ ನಿಗದಿಯಾಗಬೇಕು. ಈ ಮೂಲಕ ಮಹಿಳೆಯರು ತಮ್ಮ ಆಳಲು, ಸತ್ಯ ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕು. ಸಂತ್ರಸ್ತೆಯರ ಸಮಸ್ಯೆ ಆಲಿಸಿದ ಬಳಿಕ ಆ ಸಮಸ್ಯೆಗೆ ಸ್ಪಂದನೆ ಹಾಗೂ ಭದ್ರತೆ ನೀಡಬೇಕು. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸೂಕ್ತ ಪರಿಹಾರ ಹಾಗೂ ಪ್ರತ್ಯೇಕ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಇಂತಹ ಪ್ರಕರಣದಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಗಮನಾರ್ಹ ನಿಲುವು ಸರ್ಕಾರ ತೆಗೆದುಕೊಳ್ಳುವ ಮೂಲಕ ಸಂತ್ರಸ್ತ ಮಹಿಳೆಯರು ಮತ್ತೆ ಸಾಮಾಜಿಕ ಬದುಕು ಕಲ್ಪಿಸಬೇಕಾಗಿದೆ. ಸಂತ್ರಸ್ತೆಯರ ಪ್ರತಿ ಹೇಳಿಕೆಗಳನ್ನು ಗೌಪ್ಯವಾಗಿಡುವ ಭರವಸೆ ಅವರಲ್ಲಿ ಮೂಡಿಸಬೇಕು. ಈ ಪ್ರಕರಣದಿಂದಾಗಿ ನೊಂದು, ಅವಮಾನಕ್ಕೊಳಗಾಗಿರುವ ಮಹಿಳೆಯರು ಸಮಾಜದಲ್ಲಿ ತಲೆ ಎತ್ತಿ ತಿರುಗಾಡಬೇಕು. ಎಲ್ಲರಂತೆ ನೆಂಟರು, ಬಂಧುಗಳು, ಮದುವೆ ಸೇರಿದಂತೆ ಶುಭ ಸಮಾರಂಭ ಗಳಲ್ಲಿ ಮೊದಲಿನಂತೆ ಪಾಲ್ಗೊಳ್ಳುವ ವಾತಾವರಣ ನಿರ್ಮಾಣವಾಗುವಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular