ಕೆ.ಆರ್.ನಗರ : ತಾಲೂಕಿನ ಕಂಚಿನಕೆರೆ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿಕೊಡುವುದರ ಜತೆಗೆ ಇತರ ಮೂಲಭೂತ ಸವಲತ್ತುಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿ ಕಂಚಿನಕೆರೆ ಗ್ರಾಮದಲ್ಲಿ ಗ್ರಾಮ ಪರಿಮಿತಿಯಲ್ಲಿ ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣ ಮಾಡಲು 40 ಲಕ್ಷ ರೂ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಅಭಿವೃದ್ಧಿ ಕೆಲಸಗಳು ನಡೆಯುವಾಗ ಸಾರ್ವಜನಿಕರು ನಿಗಾವಹಿಸಬೇಕು ಎಂದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿರುವ ಬಗ್ಗೆ ಅಧಿಕಾರಿಗಳು ಖಾತರಿಪಡಿಸಿಕೊಳ್ಳುವುದರ ಜತೆಗೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೂ ಹೆಚ್ಚು ಗಮನಹರಿಸಬೇಕೆಂದು ಸಲಹೆ ನೀಡಿದರು.
ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಿಸಿಕೊಡುವುದರ ಜತೆಗೆ ಕ್ರೀಡಾಂಗಣಕ್ಕೂ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದ ಶಾಸಕರು ಇದರೊಂದಿಗೆ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಸಕಾಲದಲ್ಲಿ ಸಾರಿಗೆ ಬಸ್ಸುಗಳು ಸಂಚಾರ ಮಾಡದೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದಾಗ ಇದಕ್ಕೆ ಸ್ಪಂದಿಸಿದ ಶಾಸಕ ಡಿ.ರವಿಶಂಕರ್ ಇದಕ್ಕೆ ಕೂಡಲೇ ಅಗತ್ಯವಿರುವಷ್ಟು ಬಸ್ಸುಗಳು ಸಂಚಾರ ಮಾಡುವತ್ತ ಗಮನಹರಿಸಿ ಈ ಸಂಬಂಧ ನನಗೆ ವರದಿ ನೀಡಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಆ ನಂತರ ಗ್ರಾಮ ಪ್ರದಕ್ಷಿಣೆ ಮಾಡಿದ ಶಾಸಕರು ಇತರ ಮೂಲ ಸವಲತ್ತುಗಳನ್ನು ಒದಗಿಸುವ ಬಗ್ಗೆ ಗ್ರಾಮಪಂಚಾಯಿತಿಯವರು ಗಮನಹರಿಸಬೇಕು ಎಂದರಲ್ಲದೆ ಈ ವಿಚಾರದ ಬಗ್ಗೆ ದೂರುಗಳು ಕೇಳಿಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು ಶಾಸಕ ಡಿ.ರವಿಶಂಕರ್ ಅವರು ಅರ್ಜುನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಬಾಲೂರು ಹೊಸಕೊಪ್ಪಲು ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗೆ ಚಾಲನೆ ನೀಡಿದರು.
ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ.ಇಒ ವಿ.ಪಿ.ಕುಲದೀಪ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶಿವಮೂರ್ತಿ, ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ್, ಬಿಇಒ ಆರ್.ಕೃಷ್ಣಪ್ಪ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಜಿ.ಸಿದ್ದೇಶ್ವರ ಪ್ರಸಾದ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಆನಂದ್, ರಾಜಸ್ವ ನಿರೀಕ್ಷ ಪ್ರಕಾಶ್, ಗ್ರಾಮ ಆಡಳಿತಾಧಿಕಾರಿ ರಜಿತ್ ಕುಮಾರ್, ಅರ್ಜುನಹಳ್ಳಿ ಗ್ರಾ.ಪಂ. ಪಿಡಿಒ ಸಂತೋಷ್, ಅಖಿಲ ಭಾರತ ವೀರ ಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಪಿ.ರಮೇಶ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಪಿ.ಯೋಗೀಶ್, ಅರ್ಜುನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ದಿಲೀಪ್, ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್.ವೆಂಕಟೇಶ್, ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ಕೆ.ಹೆಚ್.ಬುಡಿಗೌಡ, ಮಧುಸೂದನ್, ಬಿ.ಹೆಚ್.ಕುಮಾರ್, ಎಂ.ಟಿ.ರಾಜೇಶ್, ಸೇರಿದಂತೆ ಇನ್ನಿತರರು ಹಾಜರಿದ್ದರು.



