ಮಡಿಕೇರಿ : ಪ್ರತಿಯೊಬ್ಬ ನಾಗರಿಕರಿಗೂ ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ನಗರಸಭೆ ಅಧ್ಯಕ್ಷರಾದ ಎನ್.ಪಿ.ಅನಿತಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವಂತಹ ವೈರಾಣು ಎಂದರೆ ಅದು ಎಚ್‌ಐವಿ ಸೋಂಕು ಆಗಿದೆ. ಸೊಂಕನ್ನು ತಡೆಗಟ್ಟಲು ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದ್ದು, ಅದರಲ್ಲಿ ಎಚ್‌ಐವಿ ಸೋಂಕಿನ ಜಾಗೃತಿ ಕಾರ್ಯಕ್ರಮವು ಒಂದಾಗಿದೆ ಎಂದು ತಿಳಿಸಿದರು.
ಹಚ್ಚೆ ಹಾಕಿಸುವುದು, ರಕ್ತವನ್ನು ಪರೀಕ್ಷಿಸದೆ ಸ್ವೀಕಾರ ಮಾಡುವುದು, ಗರ್ಭಿಣಿಯರು ಎಚ್‌ಐವಿ ಪರೀಕ್ಷೆ ಮಾಡಿಸದೆ ಇರುವುದು, ಅಸುರಕ್ಷಿತ ಲೈಂಗಿಕ ಕ್ರಿಯೆಗೆ ಒಳಗಾಗುವುದು ಇವುಗಳಿಂದ ಎಚ್‌ಐವಿ ಸೋಂಕು ಹರಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಡಾ.ಎನ್.ಆನಂದ್ ಮಾತನಾಡಿ ವಿಶ್ವ ಏಡ್ಸ್ ದಿನವು ಸಮುದಾಯಗಳ ಸಾಧನೆಗಳ ಆಚರಣೆಗಿಂತ ಹೆಚ್ಚಾಗಿ ತಮ್ಮ ನಾಯಕತ್ವವನ್ನು ಸಕ್ರಿಯಗೊಳಿಸುವ ಬೆಂಬಲಿಸುವ ಕ್ರಿಯೆಯಾಗಿದೆ. ಎಚ್‌ಐವಿಯನ್ನು ಅಂತ್ಯಗೊಳಿಸುವಲ್ಲಿ ಸಮುದಾಯಗಳು ನಾಯಕತ್ವದ ಪಾತ್ರವನ್ನು ಹೆಚ್ಚಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.
ವಿಶ್ವ ಏಡ್ಸ್ ದಿನವೂ ಇಲ್ಲಿಯವರೆಗಿನ ಪ್ರಗತಿಯನ್ನು ಪ್ರತಿಬಿಂಬಿಸಲು ೨೦೩೦ ರ ವೇಳೆಗೆ ಏಡ್ಸ್ ಅನ್ನು ಕೊನೆಗೊಳಿಸುವ ಗುರಿಗಳನ್ನು ಸಾಧಿಸಲು ಕಾರ್ಯಕ್ರಮದ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಎಚ್‌ಐವಿ ಪ್ರತಿಕ್ರಿಯೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಒಂದು ಅವಕಾಶವಾಗಿದೆ ಎಂದು ತಿಳಿಸಿದರು. ಈ ದಿನವನ್ನು ಒಂದೊಂದು ಘೋವಾಕ್ಯದೊಂದಿಗೆ ಪ್ರಾರಂಭಿಸಲಾಗುತ್ತದೆ . “ಸಮುದಾಯಗಳು ಮುನ್ನಡೆಸಲಿ” (ಸಮುದಾಯಗಳು ಮುನ್ನಡೆಸುವ ಮೂಲಕ ಜಗತ್ತಿನಲ್ಲಿ ಏಡ್ಸ್ ಅನ್ನು ಕೊನೆಗಾಣಿಸಬಹುದು) ಎಂದಾಗಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಅವರು ಮಾತನಾಡಿ ಕ್ರಮಬದ್ಧವಾದ ಜೀವನಶೈಲಿ ಇದ್ದರೆ ಎಚ್‌ಐವಿ ಸೋಂಕಿಗೆ ಒಳಗಾಗುವುದಿಲ್ಲ. ಆದ್ದರಿಂದ ಆರೋಗ್ಯಯುತವಾಗಿ ಸಮಾಜದಲ್ಲಿ ಬದುಕಲು ಸಂವಿಧಾನದಲ್ಲಿ ಹಕ್ಕಿದೆ. ಅದನ್ನು ಗಮನದಲ್ಲಿಟ್ಟುಕೊಂಡು ರಕ್ತಪರೀಕ್ಷೆ ಮಾಡಿಸಿಕೊಂಡು ಉತ್ತಮ ಆರೋಗ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಸಮುದಾಯದಲ್ಲಿ ಬದುಕುವ ಹಕ್ಕು ಪ್ರತಿಯೊಬ್ಬರಿಗೆ ಕಾನೂನು ನೀಡಿದೆ. ಹಾಗೆಯೇ ರೋಗಲಕ್ಷಣ ಕಂಡು ಬಂದಲ್ಲಿ ಇನ್ನೊಬ್ಬರಿಗೆ ಹರಡಿಸುವುದು ಕಾನೂನಿನ ಅಡಿಯಲ್ಲಿ ಅಪರಾಧ. ಅದನ್ನು ಪರಿಗಣನೆಗೆ ತೆಗೆದುಕೊಂಡು ಎಚ್‌ಐವಿ ಸೋಂಕು ಇದ್ದಲ್ಲಿ ರಕ್ತಪರೀಕ್ಷೆ ಮಾಡಿಸಿ ಚಿಕಿತ್ಸೆಗೆ ಒಳಗಾಗುವ ಅಗತ್ಯ ಇದೆ ಎಂದರು.