ಶೀಘ್ರದಲ್ಲಿಯೇ ಪುರಸಭೆ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳ ಸಭೆ ನಡೆಸುವುದಾಗಿ ಡಿ. ರವಿಶಂಕರ್ ಹೇಳಿಕೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಳೆದ ಆರು ತಿಂಗಳಿನಿಂದ ಬಾಗಿಲು ಮುಚ್ಚಿರುವ ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ತೆರೆಸಲು ಮೂರು ಬಾರಿ ಸಭೆ ನಿಗದಿಯಾಗಿತ್ತು ಆದರೆ ತಾಂತ್ರಿಕ ಕಾರಣಗಳಿಂದ ಅದು ಮುಂದಕ್ಕೆ ಹೋಗಿದ್ದು ಶೀಘ್ರದಲ್ಲಿಯೇ ಮತ್ತೆ ಸಭೆ ನಡೆಸಿ ಈ ವಿಚಾರದಲ್ಲಿ ಗಂಭೀರ ಗಮನ ಹರಿಸುವುದಾಗಿ ಶಾಸಕ ಡಿ. ರವಿಶಂಕರ್ ತಿಳಿಸಿದರು.
ಕೆ.ಆರ್.ನಗರ ಪಟ್ಟಣದ ಹೊರವಲಯದ ಅರ್ಕೆಶ್ವರ ಸ್ವಾಮಿ ದೇವಾಲಯದ ಸಂರಕ್ಷಣಾ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ನೀಡಿರುವ ಸಲಹೆಯನ್ನು ಸ್ವೀಕರಿಸುವುದಾಗಿ ಹೇಳಿದರು.
ಶೀಘ್ರದಲ್ಲಿಯೇ ಪುರಸಭೆ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳ ಸಭೆ ನಡೆಸುವುದಾಗಿ ಮಾಹಿತಿ ನೀಡಿದ ಶಾಸಕರು ಈ ಸಭೆಗೆ ಹೆಚ್. ವಿಶ್ವನಾಥ್ ಸೇರಿದಂತೆ ಇತರರನ್ನು ಆಹ್ವಾನಿಸಿ ಅವರ ಮಾರ್ಗದರ್ಶನ ಪಡೆಯುವುದಾಗಿ ಪ್ರಕಟಿಸಿದ ಅವರು ಮಳಿಗೆಗಳ ಬಾಡಿಗೆದಾರರ ಹಿತ ಕಾಯಲು ಬದ್ದನಾಗಿರುವುದಾಗಿ ನುಡಿದರು.
ವಾಣಿಜ್ಯ ಮಳಿಗೆಗಳನ್ನು ಹರಾಜಿನಲ್ಲಿ ಪಡೆದಿರುವ ಕೆಲವು ಬಾಡಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದು ಇದು ಸಹ ನಮಗೆ ತೊಂದರೆಯಾಗಿದ್ದು ಅಂತಿಮವಾಗಿ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ನ್ಯಾಯಾಲಯಕ್ಕೆ ಹೋಗಿರುವವರ ಜೊತೆ ಮಾತುಕತೆ ನಡೆಸುವುದಾಗಿ ಎಚ್. ವಿಶ್ವನಾಥ್ ಅವರು ಹೇಳಿದ್ದು ಇದನ್ನು ಸ್ವಾಗತಿಸುವುದಾಗಿ ತಿಳಿಸಿದ ಅವರು ಪುರಸಭೆ ಗರುಡಗಂಬದ ವೃತ್ತದಲ್ಲಿ ನಾಲ್ಕು ಮಳಿಗೆಗಳ ಮುಂಭಾಗ ಕುಸಿದು ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಆದೇಶ ನೀಡಿದ್ದೇನೆ ಎಂದರು.