ಶಿವಮೊಗ್ಗ: ರಾಜ್ಯದಲ್ಲಿ ಹೊಸದಾಗಿ ಆರಂಭಿಸಲಾಗುತ್ತಿರುವ ೪೫೦ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ರೂ. ೨,೦೦೦ ಕೋಟಿ ದೀರ್ಘಾವಧಿ ಸಾಲ ನೀಡಲು ಮುಂದಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರ ೫೦೦ ಕೋಟಿ ಅನುದಾನ ನೀಡಲಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು. ಈ ಅನುದಾನದಲ್ಲಿ ಕೆಪಿಎಸ್ ಶಾಲೆಗಳಿಗೆ ನೂತನ ಕಟ್ಟಡ, ಮೈದಾನ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ೬ ಕೋಟಿಯಿಂದ ೮ ಕೋಟಿಯವರೆಗೆ ವ್ಯಯಿಸಲಾಗುವುದು ಎಂದು ಅವರು ಹೇಳಿದರು.
ಪಾಲಕರಿಂದ ಬೇಡಿಕೆ ಹೆಚ್ಚುತ್ತಿರುವ ಕಾರಣ ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ವಿಭಾಗ ಆರಂಭಿಸಲು ನಿರ್ಧರಿಸಲಾಗಿದೆ. ಇಲ್ಲಿಯವರೆಗೆ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ತರಗತಿಗಳು ನಡೆಯುತ್ತಿವೆ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜುಗಳ ೨೫,೦೦೦ ವಿದ್ಯಾರ್ಥಿಗಳಿಗೆ ಕಳೆದ ವರ್ಷ ನೀಟ್, ಸಿಇಟಿ ತರಬೇತಿ ನೀಡಲಾಗಿತ್ತು. ಈ ವರ್ಷದಿಂದ ಯಾವುದೇ ಮಿತಿ ಇರುವುದಿಲ್ಲ. ಎಲ್ಲ ವಿದ್ಯಾರ್ಥಿಗಳಿಗೂ ತರಬೇತಿಯ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರದಿಂದ ಅನುದಾನ ಕಡಿತ : ಕೇಂದ್ರ ಸರ್ಕಾರವು ಸರ್ವ ಶಿಕ್ಷಣ ಅಭಿಯಾನದಡಿ (ಎಸ್‌ಎಸ್‌ಎ) ಕೊಡುತ್ತಿದ್ದ ಅನುದಾನವನ್ನು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಿಗೆ ಕಡಿತಗೊಳಿಸಿದೆ ಎಂದು ಆರೋಪಿಸಿದ ಮಧು ಬಂಗಾರಪ್ಪ, `ಯೋಜನೆಯಡಿ ವರ್ಷಕ್ಕೆ ಪ್ರತೀ ವಿದ್ಯಾರ್ಥಿಗೆ ಕರ್ನಾಟಕದಲ್ಲಿ ೨,೨೦೦ ರೂ. ಅನುದಾನ ಕೊಡುತ್ತಿದ್ದರೆ, ಟಿಡಿಪಿ ಅಧಿಕಾರದಲ್ಲಿರುವ ಆಂಧ್ರಪ್ರದೇಶದಲ್ಲಿ ೬,೦೦೦ ಕೊಡುತ್ತಿದೆ. ಈ ತಾರತಮ್ಯ ಸರಿಯಲ್ಲ. ಕೇಂದ್ರದವರು ನಮ್ಮಿಂದ (ಕರ್ನಾಟಕ) ಹೆಚ್ಚು ತೆರಿಗೆ ಸಂಗ್ರಹಿಸುತ್ತಾರೆ. ಆದರೂ ನಮ್ಮ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.